ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮುಂದಿನ ಬಹುನಿರೀಕ್ಷಿತ ಸಿನಿಮಾ ಸಲಾರ್ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಸಿನಿಮಾ ಕುರಿತು ವಿಶ್ವದಾದ್ಯಂತ ಅಭಿಮಾನಿಗಳಲ್ಲಿ ಅಪಾರ ಉತ್ಸಾಹ ಮನೆ ಮಾಡಿದೆ. ಚಿತ್ರದ ಪ್ರಚಾರ, ಅಡ್ವಾನ್ಸ್ ಟಿಕೆಟ್ ಬುಕಿಂಗ್ ಜೋರಾಗೇ ನಡೆಯುತ್ತಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಮೇಲಿನ ಉತ್ಸಾಹ, ನಿರೀಕ್ಷೆ, ಕುತೂಹಲ ವ್ಯಕ್ತಪಡಿಸಲು ಕೆನಡಾದಲ್ಲಿರುವ ಪ್ರಭಾಸ್ ಅಭಿಮಾನಿಗಳು 'ಸಿನಿಮೀಯ ಏರ್ ಸೆಲ್ಯೂಟ್' ಅನ್ನು ಆಯೋಜಿಸಿದ್ದರು. ಸಿನಿಮಾ ಹಿಂದಿರುವ ಹೊಂಬಾಳೆ ಫಿಲ್ಮ್ಸ್ ಅದ್ಭುತ ವಿಡಿಯೋ ಅನಾವರಣಗೊಳಿಸಿದ್ದು, ಇದು ಸಿನಿಮಾ ಸುತ್ತಲಿನ ನಿರೀಕ್ಷೆಗಳನ್ನು ಸಾಬೀತುಪಡಿಸಿದೆ.
ಶುಕ್ರವಾರದಂದು ಸಲಾರ್ ಸಿನಿಮಾ ನಿರ್ಮಾಣ ಮಾಡಿರುವ ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ವಿಡಿಯೋ ಹಂಚಿಕೊಂಡಿದೆ. ''ಕೆನಡಾದ ರೆಬೆಲ್ ಸ್ಟಾರ್ ಅಭಿಮಾನಿಗಳಿಂದ ಪ್ರಭಾಸ್ ಅವರಿಗೆ ಸಿನಿಮ್ಯಾಟಿಕ್ ಏರ್ ಸೆಲ್ಯೂಟ್. ಡಿಸೆಂಬರ್ 22 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಸಲಾರ್ 1 ತೆರೆಕಾಣಲಿದೆ'' ಎಂಬ ಕ್ಯಾಪ್ಷನ್ ಕೂಡ ಕೊಟ್ಟಿದೆ.
ಕೆನಡಾದ ಟೊರೊಂಟೊದ ಪ್ರಭಾಸ್ ಅಭಿಮಾನಿಗಳು ಆರು ಹೆಲಿಕಾಪ್ಟರ್‌ಗಳನ್ನು ಹಾರಿಸಿದ್ದಾರೆ. ಒಂದೊಂದು ಹೆಲಿಕಾಪ್ಟರ್‌ಗಳಲ್ಲಿಯೂ 'SALAAR'ನ ಒಂದೊಂದು ಅಕ್ಷರಗಳನ್ನು ಕಾಣಬಹುದು. ನಿಸ್ಸಂದೇಹವಾಗಿ ಇದೊಂದು ಅದ್ಭುತ ಕ್ಷಣವಾಗಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.