ಎಂ.ಎಸ್ ಧೋನಿ ಬಯೋಪಿಕ್ ಹಾಗೂ ಕ್ರಿಕೆಟಿಗ ಕಪಿಲ್ ದೇವ್ ನಾಯಕತ್ವದಲ್ಲಿ ವರ್ಲ್ಡ್ ಕಪ್ ಗೆದ್ದ ಬಗ್ಗೆ ಈಗಾಗಲೇ ಸಿನಿಮಾ ಮಾಡಲಾಗಿದೆ. ಇದೀಗ ಶ್ರೀಲಂಕಾದ ಮಾಜಿ ಕ್ರಿಕೆಟ್ ಆಟಗಾರ ಮುತ್ತಯ್ಯ ಮುರಳೀಧರನ್ ಅವರ ಜೀವನಾಧಾರಿತ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರಕ್ಕೆ '800' ಎಂದು ಶೀರ್ಷಿಕೆ ಇಡಲಾಗಿದೆ.
ವಿಶೇಷ ಶೈಲಿಯ ಬೌಲರ್ ಎನಿಸಿಕೊಂಡ ಮುತ್ತಯ್ಯ ಮುರಳೀಧರನ್ ಸಾಕಷ್ಟು ಕಷ್ಟಗಳನ್ನು ಎದುರಿಸಿ ಬಂದಿದ್ದಾರೆ. ಕ್ರಿಕೆಟ್ ವೃತ್ತಿಜೀವನದಲ್ಲಿ ಹಲವು ಅವಮಾನಗಳನ್ನು ಅನುಭವಿಸಿದ್ದಾರೆ. ಈ ಎಲ್ಲ ವಿಚಾರಗಳನ್ನು ಒಂಗೊಂಡು ನಿರ್ದೇಶಕ ಎಂ.ಎಸ್ ಶ್ರೀಪತಿ ಸಿನಿಮಾ ಮಾಡಿದ್ದಾರೆ. ಮುತ್ತಯ್ಯ ಮುರಳೀಧರನ್ ಪಾತ್ರದಲ್ಲಿ ಮಧು ಮಿತ್ತಲ್ ಬಹಳ ಅದ್ಭುವಾಗಿ ಅಭಿನಯಿಸಿದ್ದಾರೆ. 800 ಚಿತ್ರ ಒಟಿಟಿ ವೇದಿಕೆ ಜಿಯೋ ಸಿನಿಮಾದಲ್ಲಿ ಡಿಸೆಂಬರ್ 2 ರಂದು ಅಂದರೆ ನಾಳೆ ಕನ್ನಡ ಸೇರಿದಂತೆ 6 ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆ ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ ನಿರ್ದೇಶಕ ಶ್ರೀಪತಿ, ನಾಯಕ ನಟ ಮಧು ಮಿತ್ತಲ್ ಹಾಗೂ ಮುತ್ತಯ್ಯ ಮುರಳೀಧರನ್ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು.
ನಿರ್ದೇಶಕ ಎಂ.ಎಸ್ ಶ್ರೀಪತಿ ಮಾತನಾಡಿ, ಈ ಸಿನಿಮಾ ಮಾಡಲು ಮುಖ್ಯ ಕಾರಣ 'ಮೂವಿ ಟ್ರೈನ್ ಮೋಷನ್ ಪಿಚ್ಚರ್' ನಿರ್ಮಾಣ ಸಂಸ್ಥೆ. ಅವರು ಮುರಳೀಧರನ್ ಬಳಿ ಬಯೋಗ್ರಾಫಿ ಮಾಡಲು ಅನುಮತಿ ಪಡೆದು ನೀವು ನಿರ್ದೇಶನ ಮಾಡಿ ಅಂತಾ ಕೇಳಿಕೊಂಡರು. ಹಾಗಾಗಿ ನಾನೇ ನಿರ್ದೇಶನ ಮಾಡಿದೆ. ಮುತ್ತಯ್ಯ ಮುರಳೀಧರನ್ ಮಾಡಿರೋ ಸಾಧನೆ ಬಹಳ ದೊಡ್ಡದು. ಅದೆಷ್ಟೋ ಜನರಿಗೆ ಅವರು ಸ್ಫೂರ್ತಿಯಾಗಿದ್ದಾರೆ. ಎರಡು ವರ್ಷಗಳ ಕಾಲ ಮುತ್ತಯ್ಯ ಮುರಳೀಧರನ್ ಜೊತೆಗಿದ್ದು, ಅವರ ಬಗ್ಗೆ ಸಂಪೂರ್ಣ ರಿಸರ್ಚ್ ಮಾಡಿ ಈ ಸಿನಿಮಾ ಮಾಡಿದೆ.
ಇನ್ನು ಚಿತ್ರ ಈಗಾಗಲೇ ಥಿಯೇಟರ್ನಲ್ಲಿ ಬಿಡುಗಡೆ ಆಗಿ ಒಳ್ಳೆ ರೆಸ್ಪಾನ್ಸ್ ಸ್ವೀಕರಿಸಿದೆ. ಮುರಳೀಧರನ್ ಪಾತ್ರಕ್ಕೆ ಮೊದಲು ವಿಜಯ್ ಸೇತುಪತಿ ಅಂದುಕೊಂಡಿದ್ವಿ. ಆದರೆ ಸರಿಯಾಗಿ ಕೂಡಿ ಬರಲಿಲ್ಲ. ಆಡಿಶನ್ ಮೂಲಕ ಮಧು ಮಿತ್ತಲ್ ಆಯ್ಕೆ ಆದ್ರು. ಶ್ರೀಲಂಕಾದಲ್ಲಿ 160 ದಿನ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ವಿದೇಶದಲ್ಲೂ ಶೂಟಿಂಗ್ ಮಾಡಲಾಗಿದೆ. ಶ್ರೀಲಂಕಾದಲ್ಲಿ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಇದೀಗ ಜಿಯೋ ಸಿನಿಮಾದಲ್ಲಿ ಕನ್ನಡ, ತಮಿಳು, ತೆಲಗು, ಹಿಂದಿ ಮಲಯಾಳಂ ಹಾಗೂ ಬೆಂಗಾಳಿ ಸೇರಿದಂತೆ ಆರು ಭಾಷೆಯಲ್ಲಿ ಪ್ರಸಾರ ಆಗಲಿದೆ ಎಂದು ಮಾಹಿತಿ ಹಂಚಿಕೊಂಡರು.