ಪವನ್ ಮಲ್ಹೋತ್ರಾ ಮತ್ತು ಅಮೀರ್ ಬಶೀರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ "72 ಹೂರೆನ್" (72 Hoorain) ಚಿತ್ರದ ನಿರ್ಮಾಪಕರು ಇಂದು ಆನ್ಲೈನ್ ವೇದಿಕೆಯಲ್ಲಿ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಎರಡು ಬಾರಿ ರಾಷ್ಟ್ರಪ್ರಶಸ್ತಿ ಗೆದ್ದುಕೊಂಡಿರುವ ನಿರ್ದೇಶಕ ಸಂಜಯ್ ಪುರಾಣ್ ಸಿಂಗ್ ಚೌಹಾಣ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಉಗ್ರವಾದದ ಪರಿಣಾಮಗಳ ಮೇಲೆ ಚಿತ್ರಕಥೆಯನ್ನು ಕೇಂದ್ರೀಕರಿಸಿದ್ದಾರೆ.
ಜುಲೈ 7ರಂದು ಬಿಡುಗಡೆ ಕಾಣಲು ಸಜ್ಜಾಗಿರುವ ಟ್ರೇಲರ್‌ಗೆ ಪ್ರಮಾಣಪತ್ರ ನೀಡಲು ಸೆನ್ಸಾರ್ ಮಂಡಳಿ ನಿರಾಕರಿಸಿದೆ ಎಂದು ಸಹನಿರ್ಮಾಪಕ ಅಶೋಕ್ ಪಂಡಿತ್ ತಿಳಿಸಿದ್ದಾರೆ. ವಿಡಿಯೋ ಸಂದೇಶದಲ್ಲಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಮತ್ತು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC)ಗೆ ಈ ಬಗ್ಗೆ ಮನವಿ ಮಾಡಿಕೊಂಡಿದ್ದಾರೆ. "ನಮ್ಮ ಸೃಜನಶೀಲತೆ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಸೆನ್ಸಾರ್ ಸಂಸ್ಥೆಯ ಜನರು ಪ್ರಯತ್ನಿಸುತ್ತಿದ್ದಾರೆ" ಎಂದು ಅಸಮಾಧಾನ ಹೊರಹಾಕಿದ್ದಾರೆ.
ನಿರ್ಮಾಪಕರು ಶೇರ್ ಮಾಡಿರುವ 1:30 ನಿಮಿಷದ ವಿಡಿಯೋ ಪ್ರಕಾರ, "72 ಹೂರೆನ್ ಚಿತ್ರದ ಟ್ರೇಲರ್‌ಗೆ ಸೆನ್ಸಾರ್ ಮಂಡಳಿಯು ಪ್ರಮಾಣಪತ್ರವನ್ನು ನೀಡಲು ನಿರಾಕರಿಸಿರುವುದು ನಮಗೆ ಸಾಕಷ್ಟು ಆಘಾತ ತಂದಿದೆ ಮತ್ತು ಆಶ್ಚರ್ಯವಾಗಿದೆ. ಹಾಸ್ಯಾಸ್ಪದ ಮತ್ತು ದುಃಖದ ಸಂಗತಿಯೆಂದರೆ, ರಾಷ್ಟ್ರೀಯ ಪ್ರಶಸ್ತಿ ಪಡೆದ ಚಲನಚಿತ್ರ, ಐಎಫ್‌ಎಫ್‌ಐ (ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ) ನಲ್ಲಿ ಪ್ರಶಸ್ತಿ ಗೆದ್ದಿರುವ ಚಿತ್ರದಲ್ಲಿರುವ ದೃಶ್ಯಗಳೇ ಟ್ರೇಲರ್ನಲ್ಲಿದೆ. ಒಂದು ಕಡೆ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಕೊಟ್ಟಿದ್ದೀರಿ, ಇನ್ನೊಂದು ಕಡೆ ಚಿತ್ರದ ಟ್ರೇಲರ್‌ಗೆ ಪ್ರಮಾಣಪತ್ರ ನೀಡಲು ನಿರಾಕರಿಸುತ್ತಿದ್ದೀರಿ'' ಎಂದು ಟೀಕಿಸಿದ್ದಾರೆ.
ಗೋವಾದಲ್ಲಿ 2019ರ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI)ನಲ್ಲಿ ಭಾರತೀಯ ಪನೋರಮಾ ವಿಭಾಗದ ಅಡಿಯಲ್ಲಿ "72 ಹೂರೆನ್" ಪ್ರಥಮ ಪ್ರದರ್ಶನಗೊಂಡಿತು. ಅಲ್ಲಿ ಚಿತ್ರ ICFT-UNESCO GANDHI MEDAL ಗೌರವ ಸ್ವೀಕರಿಸಿತು. 2021ರಲ್ಲಿ, ಚೌಹಾಣ್ ಅವರು ಅತ್ಯುತ್ತಮ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಗೆದ್ದರು. ಆದ್ರೆ ಈ ತಿಂಗಳ ಆರಂಭದಲ್ಲಿ ಕಾಶ್ಮೀರದ ಪ್ರಮುಖ ಧಾರ್ಮಿಕ ಮತ್ತು ರಾಜಕೀಯ ಮುಖಂಡರು "72 ಹೂರೆನ್" ನಲ್ಲಿ ಮುಸ್ಲಿಮರ ಕುರಿತಾದ ಚಿತ್ರಣವನ್ನು ಖಂಡಿಸಿದರು. ಅಲ್ಲದೇ ಈ ಚಲನಚಿತ್ರವು ಸಮುದಾಯದ "ಭಾವನೆಗಳನ್ನು ನೋಯಿಸುತ್ತದೆ" ಎಂದು ಸಹ ಹೇಳಿದರು.