69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಟಾಲಿವುಡ್ ನಟ ಅಲ್ಲು ಅರ್ಜುನ್ ದೆಹಲಿಗೆ ತೆರಳಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರ ಪ್ರಕಟಿಸಿದ ರಾಷ್ಟ್ರಪ್ರಶಸ್ತಿಯಲ್ಲಿ ಅವರು ಅತ್ಯುತ್ತಮ ನಟರಾಗಿ ಆಯ್ಕೆಯಾಗಿದ್ದರು. ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅಲ್ಲು ಅರ್ಜುನ್ 'ರಾಷ್ಟ್ರ ಪ್ರಶಸ್ತಿ' ಸ್ವೀಕರಿಸುವರು.
ಸೋಮವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಅಲ್ಲು ಅರ್ಜುನ್ ಅವರು ಪತ್ನಿ ಅಲ್ಲು ಸ್ನೇಹಾ ರೆಡ್ಡಿ ಜೊತೆ ಕಾಣಿಸಿಕೊಂಡರು. ಈ ವೇಳೆ ಅಲ್ಲು ಅರ್ಜುನ್ ಸಂಪೂರ್ಣ ಬ್ಲ್ಯಾಕ್ ದಿರಿಸಿನಲ್ಲಿದ್ದರು. ಸ್ನೇಹಾ ವೈಟ್ ಶಾರ್ಟ್ ಡ್ರೆಸ್ಗೆ ಬ್ಲೂ ಡೆನಿಮ್ ಧರಿಸಿದ್ದರು. ಇದಕ್ಕೂ ಮುನ್ನವೇ ಆರ್ಆರ್ಆರ್ ಖ್ಯಾತಿಯ ನಿರ್ದೇಶಕ ಎಸ್ಎಸ್ ರಾಜಮೌಳಿ ಮತ್ತು ಸಂಗೀತ ಸಂಯೋಜಕ ಎಂಎಂ ಕೀರವಾಣಿ ಕೂಡ ಪ್ರಶಸ್ತಿ ಸಮಾರಂಭಕ್ಕಾಗಿ ದೆಹಲಿಗೆ ಆಗಮಿಸಿದ್ದಾರೆ. ರಾಷ್ಟ್ರ ಪ್ರಶಸ್ತಿಯನ್ನು ಆಗಸ್ಟ್ 24ರಂದು ಕೇಂದ್ರ ಸರ್ಕಾರ ಘೋಷಿಸಿತ್ತು.
ರಾಷ್ಟ್ರ ಪ್ರಶಸ್ತಿ ಗೆದ್ದ ಮೊದಲ ತೆಲುಗು ನಟ:ಅಲ್ಲು ಅರ್ಜುನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಘೋಷಣೆ ಆಗಿದೆ. ಇವರ ಬ್ಲಾಕ್ ಬಸ್ಟರ್ ಸಿನಿಮಾ 'ಪುಷ್ಪ: ದಿ ರೈಸ್' ನಲ್ಲಿನ ಅಮೋಘ ಅಭಿನಯಕ್ಕೆ ಈ ಗೌರವ ದೊರೆತಿದೆ. ತೆಲುಗು ಚಿತ್ರರಂಗದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಮೊದಲ ನಟ ಎಂಬ ಹೆಗ್ಗಳಿಕೆಗೂ ಸ್ಟೈಲಿಶ್ ಸ್ಟಾರ್ ಪಾತ್ರರಾಗಿದ್ದಾರೆ. 2021ರ ಡಿಸೆಂಬರ್ನಲ್ಲಿ ಪುಷ್ಪ 1 ಚಿತ್ರಮಂದಿರಗಳಲ್ಲಿ ತೆರೆಕಂಡು ಧೂಳೆಬ್ಬಿಸಿತು. ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿತು. ಪ್ರಸ್ತುತ ಪುಷ್ಪ ಸೀಕ್ವೆಲ್ ಶೂಟಿಂಗ್ನಲ್ಲಿ ಚಿತ್ರತಂಡ ನಿರತವಾಗಿದೆ. ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾತರರಾಗಿದ್ದಾರೆ.