ಜಮ್ಮು ಕಾಶ್ಮೀರ: ಇಲ್ಲಿಯ ಸರ್ಕಾರಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ವೊಂದರಲ್ಲಿ 'ದಿ ಕೇರಳ ಸ್ಟೋರಿ' ಚಿತ್ರದ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಐವರು ವೈದ್ಯಕೀಯ ವಿದ್ಯಾರ್ಥಿಗಳು ಗಾಯಗೊಂಡಿರುವುದಾಗಿ ಸ್ಥಳೀಯ ಪೊಲೀಸ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಹಾಸ್ಟೆಲ್ನ ಕೆಲವು ವಿದ್ಯಾರ್ಥಿಗಳ ಮತ್ತು ಹೊರಗಿನವರ ನಡುವೆ ಈ ಮಾರಾಮಾರಿ ನಡೆದಿದ್ದು, ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಸಹ ಅವರು ತಿಳಿಸಿದ್ದಾರೆ. ಇದಕ್ಕೂ ಮುನ್ನ ಶಾಂತಿ ಕೆಡಿಸಲು ಕಾರಣರಾದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ:ಸೈಲೆಂಟ್ ಆಗಿ ಮುಹೂರ್ತ ಮುಗಿಸಿದ ರಾಧಿಕಾ ಕುಮಾರಸ್ವಾಮಿ ಅಭಿನಯದ 'ಅಜಾಗ್ರತ'
ವಿದ್ಯಾರ್ಥಿಯೊಬ್ಬ ತಮ್ಮದೇಯಾದ ಅಧಿಕೃತ ವಾಟ್ಸಾಪ್ ಗ್ರೂಪ್ನಲ್ಲಿ 'ದಿ ಕೇರಳ ಸ್ಟೋರಿ' ಚಿತ್ರದ ಲಿಂಕ್ ಅನ್ನು ಶೇರ್ ಮಾಡಿಕೊಂಡಿದ್ದ. ಮತ್ತೊಬ್ಬ ವಿದ್ಯಾರ್ಥಿ ಇದನ್ನು ಆಕ್ಷೇಪ ಮಾಡಿದ್ದನು. ಈ ವಿಚಾರವಾಗಿ ಆರಂಭವಾದ ವಾಗ್ವಾದ ಮತ್ತು ಮಾತಿನ ಚಕಮಕಿ ಎರಡು ಗುಂಪುಗಳ ನಡುವೆ ಮಾರಾಮಾರಿಗೆ ಕಾರಣವಾಗಿತ್ತು. ಘಟನೆ ಬಳಿಕ ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇದು ದುರದೃಷ್ಟಕರ. ಅಶಾಂತಿಗೆ ಕಾರಣರಾದವರು ಯಾರೇ ಆಗಿರಲಿ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಾಲೇಜು ಪ್ರಾಂಶುಪಾಲ ಡಾ. ಶಶಿ ಸೂದನ್ ಅವರು ಭರವಸೆ ನೀಡಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಳ್ಳಲಾಗಿದೆ.
ವಿವಾದದಿಂದಲೇ ಸುದ್ದಿಯಾಗಿರುವ 'ದಿ ಕೇರಳ ಸ್ಟೋರಿ' ಚಿತ್ರ ಸದ್ಯ ಬಾಕ್ಸ್ ಆಫೀಸ್ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಹಣ ಗಳಿಕೆಯಲ್ಲಿ ಹೊಸ ದಾಖಲೆ ಸಹ ಬರೆದಿದೆ. ಚಿತ್ರದಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ ,ಸೋನಿಯಾ ಬಲಾನಿ, ಸಿದ್ಧಿ ಇದ್ನಾನಿ ಮುಂತಾದ ಕಲಾವಿದರು ನಟಿಸಿದ್ದಾರೆ. ಸುದೀಪ್ತೋ ಸೇನ್ ನಿರ್ದೇಶನ ಹೇಳಿದ್ದಾರೆ.
ಇದನ್ನೂ ಓದಿ:ಇದು ನನ್ನ ಕೊನೆಯ ಚಿತ್ರ ಅಂತಾನೇ ನಾನು ಕೆಲಸ ಮಾಡುವುದು: ಕೇರಳ ಸ್ಟೋರಿ ಸ್ಟಾರ್ ಅದಾ ಶರ್ಮಾ
ಮೇ 5 ರಂದು ಬಿಡುಗಡೆಯಾಗಿರುವ 'ದಿ ಕೇರಳ ಸ್ಟೋರಿ' ಮೂವರು ಯುವತಿಯರನ್ನು ಬಲವಂತವಾಗಿ ಪ್ರೀತಿಸಿ ನಂತರ ಐಸಿಸ್ಗೆ ಸೇರಿಸಿಕೊಳ್ಳುವುದರ ಕಥೆಯಾಗಿದೆ. ಚಿತ್ರ ತೆರೆಗೆ ಬರುವ ಮುನ್ನವೇ ವಿವಾದಗಳ ಸುಳಿಯಲ್ಲಿ ಸಿಲುಕಿತ್ತು. ಟ್ರೇಲರ್ ಅನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ಇದು ಸಾಕಷ್ಟು ಲೈಕ್ಸ್ಗಳನ್ನು ಕೂಡಾ ಪಡೆದುಕೊಂಡಿತ್ತು. ಆದರೆ, ಸದ್ಯ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು ಪರ - ವಿರೋಧ ಚರ್ಚೆ ನಡೆಯುತ್ತಿದೆ. ಚಿತ್ರ 100 ಕೋಟಿ ಕ್ಲಬ್ ಸೇರಿದೆ.
ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರಾಖಂಡದಲ್ಲಿ ಚಿತ್ರವು ತೆರಿಗೆ ಮುಕ್ತವಾಗಿದ್ದರೆ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳು ಈ ಚಿತ್ರವನ್ನು ನಿಷೇಧಿಸಿವೆ. ಆದರೆ, ಕರ್ನಾಟಕ ಸೇರಿದಂತೆ ಹಲವಡೆ 'ದಿ ಕೇರಳ ಸ್ಟೋರಿ' ಚಿತ್ರವನ್ನು ಉಚಿತವಾಗಿ ಪ್ರದರ್ಶನ ಮಾಡಲಾಗುತ್ತಿದೆ.
ಇದನ್ನೂ ಓದಿ:ತಮಿಳುನಾಡಿನ ಚಿತ್ರಮಂದಿರಗಳಲ್ಲಿ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರದರ್ಶನ ರದ್ದು