ಶುಕ್ರವಾರ ಬಂತಂದ್ರೆ ಕನ್ನಡ ಚಿತ್ರರಂಗದಲ್ಲಿ ಹಬ್ಬದ ವಾತಾವರಣ. ಈ ವಾರ ಕೂಡ ಚಂದನವನದಲ್ಲಿ ಮೂರು ಬಹುನಿರೀಕ್ಷಿತ ಚಿತ್ರಗಳ ನಡುವೆ ಎರಡು ಹೊಸ ಸಿನಿಮಾಗಳು ಬಿಡುಗಡೆ ಆಗುವ ಮೂಲಕ ದಾಖಲೆ ಬರೆಯುತ್ತಿದೆ. ಹೌದು, ಈ ವಾರ ಡಾರ್ಲಿಂಗ್ ಕೃಷ್ಣ ಅಭಿನಯದ ಶುಗರ್ ಫ್ಯಾಕ್ಟರಿ, ರಾಜ್ ಬಿ ಶೆಟ್ಟಿ ನಟನೆಯ ಸ್ವಾತಿ ಮುತ್ತಿನ ಮಳೆ ಹನಿಯೇ ಹಾಗೂ ಅಭಿಷೇಕ್ ಅಂಬರೀಶ್ ನಟನೆಯ ಬ್ಯಾಡ್ ಮ್ಯಾನರ್ಸ್ ಜೊತೆ ಹೊಸಬರ ಎಲೆಕ್ಟ್ರಾನಿಕ್ ಸಿಟಿ ಹಾಗೂ ಸ್ಕೂಲ್ ಡೇಸ್ ಸೇರಿ ಐದು ಚಿತ್ರಗಳು ಬಿಡುಗಡೆ ಆಗುತ್ತಿವೆ.
ಶುಗರ್ ಫ್ಯಾಕ್ಟರಿ: ಈ ಐದು ಚಿತ್ರಗಳಲ್ಲಿ ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಕ್ರೇಜ್ ಹುಟ್ಟಿಸಿರುವ ಸಿನಿಮಾ 'ಶುಗರ್ ಫ್ಯಾಕ್ಟರಿ'. ದೀಪಕ್ ಅರಸ್ ನಿರ್ದೇಶನದ ಮತ್ತು ಡಾರ್ಲಿಂಗ್ ಕೃಷ್ಣ ಅಭಿನಯದ ಶುಗರ್ ಫ್ಯಾಕ್ಟರಿ ಚಿತ್ರ ಈಗಾಗಲೇ ಟ್ರೇಲರ್ ಹಾಗೂ ಹಾಡುಗಳಿಂದಲೇ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಡಾರ್ಲಿಂಗ್ ಕೃಷ್ಣ ಅವರ ಸಿನಿ ಜರ್ನಿಯಲ್ಲೇ ಶುಗರ್ ಫ್ಯಾಕ್ಟರಿ ಬಿಗ್ ಬಜೆಟ್ ಚಿತ್ರ. ಸೋನಾಲ್ ಮಾಂತೆರೊ, ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿ ಸೇರಿ ಮೂವರು ಬೆಡಗಿಯರ ಜೊತೆ ಡಾರ್ಲಿಂಗ್ ಕೃಷ್ಣ ರೊಮ್ಯಾನ್ಸ್ ಮಾಡಿದ್ದಾರೆ.
ಲವ್ ಸ್ಟೋರಿ ವಿತ್ ಕಾಮಿಡಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿರೋ ಶುಗರ್ ಫ್ಯಾಕ್ಟರಿ ಚಿತ್ರ ಈಗಾಗಲೇ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ನಿರ್ದೇಶಕ ದೀಪಕ್ ಅರಸ್ ಈಗಿನ ಜನರೇಶನ್ ಅನ್ನು ತಲೆಯಲ್ಲಿಟ್ಟುಕೊಂಡು ಕಥೆ ಮಾಡಿ ನಿರ್ದೇಶಿಸಿದ್ದಾರೆ. ರಂಗಾಯಣ ರಘು, ಶಶಿ ಹಾಗೂ ಮಹಾಂತೇಶ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಕಬೀರ್ ರಫಿ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನ, ಅರ್ಜುನ್ ಸಾಹಸ ನಿರ್ದೇಶನ ಹಾಗೂ ಧನಂಜಯ್ ಅವರ ನೃತ್ಯ ನಿರ್ದೇಶನ ಇದೆ. ಅದ್ಧೂರಿ ವೆಚ್ಚದಲ್ಲಿ ಗಿರೀಶ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಸ್ವಾತಿ ಮುತ್ತಿನ ಮಳೆ ಹನಿಯೇ: ಈ ಮಧ್ಯೆ ಮೋಹಕತಾರೆ ರಮ್ಯಾ ನಿರ್ಮಾಣದ ಚೊಚ್ಚಲ ಚಿತ್ರ 'ಸ್ವಾತಿ ಮುತ್ತಿನ ಮಳೆ ಹನಿಯೇ' ಕೂಡ ನಾಳೆಯೇ ಪ್ರೇಕ್ಷಕರ ಮುಂದೆ ಬರುತ್ತಿದೆ. ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರ ಗುಣ ಆಗದ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವ ಕಥೆಯನ್ನೊಳಗೊಂಡಿದೆ. ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಮತ್ತು ಸಿರಿ ರವಿಕುಮಾರ್ ಅಭಿನಯಿಸಿದ್ದು, ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ರೇಖಾ ಕೂಡ್ಲಿಗಿ, ಜೆ.ಪಿ ತುಮ್ಮಿನಾಡು, ಸ್ನೇಹ ಶರ್ಮಾ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.