ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಬೇಡಿಕೆ ನಟ ರಾಜ್ ಬಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ '45' ಚಿತ್ರದ ಮುಹೂರ್ತ ಮೈಸೂರಿನಲ್ಲಿ ನೆರವೇರಿತು. ದೇವರ ಬಳಿ ಚಿತ್ರೀಕರಿಸಲಾದ ಮೊದಲ ದೃಶ್ಯಕ್ಕೆ ಗೀತಾ ಶಿವ ರಾಜ್ಕುಮಾರ್ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.
ಮೊದಲು ಮಾತನಾಡಿದ ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್, ಇದೊಂದು ಫಿಲಾಸಫಿಕಲ್ ಎಂಟರ್ಟೈನ್ಮೆಂಟ್ ಸಿನಿಮಾ ಎಂದು ಬಣ್ಣಿಸಿದರು. ಕಳೆದ ಒಂದು ವರ್ಷದಿಂದ ಈ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಅರ್ಜುನ್ ಜನ್ಯ ಕಥೆ ಹೇಳಿದಾಗ ಬಹಳ ಇಷ್ಟವಾಗಿತ್ತು. ಆ ನಂತರ ಅನಿಮೇಶನ್ ರೂಪದಲ್ಲಿ ಚಿತ್ರವನ್ನು ತೋರಿಸಿದ್ದಾರೆ. ಅವರು ಪ್ರತಿಭಾವಂತ. ಈ ಸಿನಿಮಾದ ನಂತರ ಭಾರತದ ಟಾಪ್ ನಿರ್ದೇಶಕರ ಸಾಲಿನಲ್ಲಿ ಅರ್ಜುನ್ ಜನ್ಯ ಕೂಡ ಒಬ್ಬರಾಗುತ್ತಾರೆ ಎಂಬ ನಂಬಿಕೆ ಇದೆ. ತುಂಬಾ ಪ್ರಬುದ್ಧವಾಗಿರುವ ಪಾತ್ರ ಈ ಚಿತ್ರದಲ್ಲಿದೆ ಎಂದರು.
ನಟ ರಾಜ್ ಬಿ ಶೆಟ್ಟಿ ಮಾತನಾಡಿ, ಸಾಮಾನ್ಯವಾಗಿ ನಟರಿಗೆ ನಿರ್ದೇಶಕರು ಚಿತ್ರದ ಕಥೆ ಹೇಳಿದರೆ, ಅರ್ಜುನ್ ಜನ್ಯ ಅವರು ನನಗೆ ಚಿತ್ರವನ್ನೇ ತೋರಿಸಿದರು. ಒಂದು ಚಿತ್ರಕ್ಕೆ ನಾವು ಸಹ ಸಾಕಷ್ಟು ತಯಾರಿ ಮಾಡಿಕೊಳ್ಳುವುದರಿಂದ, ಮೊದಲು ನನ್ನ ತಂಡದ ಬಗ್ಗೆ ನನಗೆ ಹೆಮ್ಮೆ ಇತ್ತು. ಆದರೆ, ಅರ್ಜುನ್ ಜನ್ಯ ಮತ್ತು ಅವರ ತಂಡದ ಕೆಲಸ ನೋಡಿ ಆಶ್ಚರ್ಯವಾಯಿತು. ಅವರು ಈ ಚಿತ್ರಕ್ಕೆ ಮಾಡಿಕೊಂಡ ತಯಾರಿ ಅದ್ಭುತ. ಒಬ್ಬ ನಟನಾಗಿ, ಪ್ರೇಕ್ಷಕನಾಗಿ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆ ಇದೆ ಎಂದು ಹೇಳಿದರು.
ಮೊದಲ ಬಾರಿಗೆ ಹೆಸರಾಂತ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಈ ಸಿನಿಮಾದಲ್ಲಿ ಅಭಿನಯಿಸುತ್ತಿರುವುದಕ್ಕೆ ಬಹಳ ಖುಷಿಯಾಗುತ್ತಿದೆ. ಬೋಲ್ಡ್ ಆಗಿರುವ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದರು ಚಿತ್ರದ ನಾಯಕ ನಟಿ ಕೌಸ್ತುಭ ಮಣಿ. ನಂತರ ಮಾತನಾಡಿದ ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ಅರ್ಜುನ್ ಜನ್ಯ ಹೇಳಿದ ಕಥೆ ಬಹಳ ಇಷ್ಟವಾಯಿತಂತೆ. 'ಚಿತ್ರ ಘೋಷಣೆಯಾಗಿ ಹಲವು ತಿಂಗಳುಗಳಾಗಿದ್ದು, ನಿಧಾನ ಗತಿಯಲ್ಲಿ ಸಾಗುತ್ತಿತ್ತು. ಈ ಬಗ್ಗೆ ಅರ್ಜುನ್ ಜನ್ಯ ಅವರನ್ನು ಕೇಳಿದಾಗ, ಅವರು ಅನಿಮೇಶನ್ ಮೂಲಕ ಸಿನಿಮಾ ತೋರಿಸಿದರು. ಚಿತ್ರೀಕರಣ ಶುರುವಾಗುವುದಕ್ಕಿಂತ ಮೊದಲೇ, ಚಿತ್ರ ತೋರಿಸಿದರು. ನಾವು ಅಂದುಕೊಂಡಿರುವುದಕ್ಕಿಂತ ಸಿನಿಮಾ ಚೆನ್ನಾಗಿ ಬರುತ್ತದೆ ಎಂಬ ನಂಬಿಕೆಯಿದೆ' ಎಂದರು ರಮೇಶ್ ರೆಡ್ಡಿ. 45 ಚಿತ್ರವನ್ನು ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ. ರಮೇಶ್ ರೆಡ್ಡಿ ನಿರ್ಮಿಸುತ್ತಿದ್ದಾರೆ.