'2nd ಲೈಫ್' ಅಂತಾ ಟೈಟಲ್ ಇಟ್ಟುಕೊಂಡು ಹೊಸ ತಂಡವೊಂದು ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದೆ. ಯುವ ನಟ ಆದರ್ಶ್ ಗುಂಡುರಾಜ್ ಹಾಗು ಸಿಂಧೂರಾವ್ ಅಭಿನಯಿಸಿರುವ 2nd ಲೈಫ್ ಸಿನಿಮಾ ಒಂದು ವಿಭಿನ್ನ ಸಂದೇಶದೊಂದಿಗೆ ಸಿನಿ ಪ್ರೇಮಿಗಳ ಮುಂದೆ ಬರಲು ಸಜ್ಜಾಗಿದ್ದು, ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.
ಹೌದು, ಮಗು ಜನಿಸಿದ ಕೆಲವೇ ದಿನಗಳಲ್ಲಿ ಹೊಕ್ಕಳು ಬಳ್ಳಿ ಬೀಳುತ್ತದೆ. ಅದನ್ನು ಕ್ಯಾನ್ಸರ್ ರೋಗಿಗಳ ಔಷಧಕ್ಕೆ ಬಳಸಿಕೊಳ್ಳಲಾಗುತ್ತದೆ. ಕರ್ನಾಟಕ ಒಂದರಲ್ಲೇ 70 ರಿಂದ 80 ಸಾವಿರ ಜನರು ಕ್ಯಾನ್ಸರ್ಗೆ ತುತ್ತಾಗುತ್ತಿದ್ದಾರೆ. ಅಂತಹವರಿಗೆ ಇದು ಉಪಯೋಗವಾಗುತ್ತದೆ. ಕರುಳಬಳ್ಳಿಯನ್ನು ಶೇಖರಿಸಿಡುವ ಕಾರ್ಯ ಕೂಡ ಎಲ್ಲೆಡೆ ನಡೆಯುತ್ತಿದೆ. ಈ ಅಂಶವನ್ನೇ ಪ್ರಮುಖವಾಗಿಟ್ಟುಕೊಂಡು "2nd ಲೈಫ್" ಚಿತ್ರ ತಯಾರಾಗಿದೆ.
ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಸೂಕ್ಷ್ಮ ವಿಷಯವನ್ನು ನಿರ್ದೇಶಕ ರಾಜ್ ದೇವಸಂದ್ರ ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಜೀವನದಲ್ಲಿ ಯಾವುದೋ ದೊಡ್ಡ ಅನಾಹುತ ನಡೆದು ಅದರಿಂದ ಪಾರಾದಾಗ ಎಲ್ಲರೂ ಹೇಳುವುದೇನೆಂದರೆ ನಿನ್ನ ಹೊಸಜೀವನ ಆರಂಭವಾಗಿದೆ ಎಂದು. ಈ ರೀತಿಯ ಘಟನೆ ಚಿತ್ರದಲ್ಲಿ ನಡೆಯುವುದರಿಂದ ಚಿತ್ರಕ್ಕೆ "2nd ಲೈಫ್" ಅಂತ ಹೆಸರಿಡಲಾಗಿದೆ ಎಂದು ನಿರ್ದೇಶಕ ರಾಜ್ ದೇವಸಂದ್ರ ತಿಳಿಸಿದರು.