ಮಲಯಾಳಂ ಸಿನಿಮಾ '2018: ಎವ್ರಿಒನ್ ಈಸ್ ಎ ಹೀರೋ' (2018-Everyone is a Hero) ಆಸ್ಕರ್ 2024 ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಲಿದೆ ಎಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಇಂದು ತಿಳಿಸಿದೆ. ಟೊವಿನೋ ಥಾಮಸ್ (Tovino Thomas) ಮುಖ್ಯಭೂಮಿಕೆಯ ಈ ಸಿನಿಮಾ ಮೇನಲ್ಲಿ ತೆರೆಕಂಡು ಅಭೂತಪೂರ್ವ ಯಶಸ್ಸು ಗಳಿಸಿದೆ. ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪೈಕಿ ಈ ಸಿನಿಮಾವೂ ಒಂದು. ಇದೀಗ ಆಸ್ಕರ್ 2024 ನಾಮನಿರ್ದೇಶನ ಪ್ರಕ್ರಿಯೆಗೆ ಪ್ರವೇಶ ಪಡೆದುಕೊಂಡಿದೆ.
ಈ ಚಿತ್ರವು ಕೇರಳದಲ್ಲಿ ಭಾರಿ ಅವಾಂತರ ಸೃಷ್ಟಿಸಿದ ಪ್ರವಾಹದ ಹಿನ್ನೆಲೆಯ ಕಥೆಯನ್ನೊಳಗೊಂಡಿದೆ. ಇದೀಗ ವಿಶ್ವದ ಪ್ರತಿಷ್ಠಿತ ಪ್ರಶಸ್ತಿ ಪ್ರಕ್ರಿಯೆಯಲ್ಲಿ ಸ್ಥಾನ ಪಡೆಯುವ ಮೂಲಕ ಅಪರೂಪದ ಗೌರವಕ್ಕೆ ಪಾತ್ರವಾಗಿದೆ. 16 ಸದಸ್ಯರನ್ನೊಳಗೊಂಡ ಆಯ್ಕೆ ಸಮಿತಿಯು ಭಾರತೀಯ ಚಿತ್ರರಂಗದ ಹಲವು ಸಿನಿಮಾಗಳನ್ನು ಪರಿಶೀಲಿಸಿ ಅಂತಿಮವಾಗಿ '2018: ಎವ್ರಿಒನ್ ಈಸ್ ಎ ಹೀರೋ' ಚಿತ್ರವನ್ನು ಆಯ್ಕೆ ಮಾಡಿತು.
2018ರಲ್ಲಿ ಕೇರಳದ ಕೆಲ ಪ್ರದೇಶಗಳನ್ನು ಧ್ವಂಸಗೊಳಿಸಿದ್ದ ಭೀಕರ ಪ್ರವಾಹದ ಹಿನ್ನೆಲೆಯಲ್ಲಿ ಈ ಚಿತ್ರಕಥೆ ಸುತ್ತುತ್ತದೆ. ಖ್ಯಾತ ಚಲನಚಿತ್ರ ನಿರ್ಮಾಪಕ ಮತ್ತು ಆಯ್ಕೆ ಸಮಿತಿ ಅಧ್ಯಕ್ಷರಾದ ಗಿರೀಶ್ ಕಾಸರವಳ್ಳಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹವಾಮಾನ ಬದಲಾವಣೆ ಮತ್ತು ಜನರು ಎದುರಿಸುತ್ತಿರುವ ಸವಾಲುಗಳ ಕುರಿತು ಚರ್ಚಿಸಿದರು.
ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ರವಿ ಕೊಟ್ಟಾರಕರ ಮಾತನಾಡಿ, ಗಿರೀಶ್ ಕಾಸರವಳ್ಳಿ ನೇತೃತ್ವದ 16 ಸದಸ್ಯರ ಸಮಿತಿಯಿಂದ ಆಸ್ಕರ್ಗೆ ಸಿನಿಮಾ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗಿದೆ ಎಂದು ಬಹಿರಂಗಪಡಿಸಿದರು. ಇದೊಂದು ಕಠಿಣ ಆಯ್ಕೆ ಪ್ರಕ್ರಿಯೆ ಆಗಿತ್ತು, ಸಿನಿಮಾಗಳ ನಡುವೆ ಸ್ಪರ್ಧೆ ಏರ್ಪಟ್ಟಿತ್ತು ಎಂದು ತಿಳಿಸಿದರು. 22 ಸಿನಿಮಾಗಳ ಪೈಕಿ ಆಸ್ಕರ್ ನಾಮನಿರ್ದೇಶನಕ್ಕೆ '2018: ಎವ್ರಿಒನ್ ಈಸ್ ಎ ಹೀರೋ' ಆಯ್ಕೆ ಆಗಿದೆ. ದಿ ಕೇರಳ ಸ್ಟೋರಿ (ಹಿಂದಿ), ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ, ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ (ಹಿಂದಿ), ಬಲಗಂ (ತೆಲುಗು), ವಾಲ್ವಿ (ಮರಾಠಿ), ಬಾಪ್ಲ್ಯೋಕ್ (ಮರಾಠಿ), ಆಗಸ್ಟ್ 16, 1947 (ತಮಿಳು) ಸೇರಿದಂತೆ 22 ಚಿತ್ರಗಳ ಪೈಕಿ '2018: ಎವ್ರಿಒನ್ ಈಸ್ ಎ ಹೀರೋ' ಆಸ್ಕರ್ಗೆ ಅರ್ಹ ಸಿನಿಮಾ ಆಗಿ ಆಯ್ಕೆಯಾಗಿದೆ ಎಂದು ಮಾಹಿತಿ ಹಂಚಿಕೊಂಡರು.