ಬೆಂಗಳೂರು: ತನ್ನ ಅಣ್ಣನ ಪತ್ನಿಗೆ ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಿದ ಆರೋಪ ಸಾಬೀತಾದ ಹಿನ್ನೆಲೆ ಹಿರಿಯ ನಟಿ ಅಭಿನಯ ಅವರಿಗೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ್ ಆದೇಶಿಸಿದೆ.
ಅಭಿನಯ ಅವರ ಅಣ್ಣ ಶ್ರೀನಿವಾಸ್ ಅವರ ಪತ್ನಿ ಲಕ್ಷ್ಮೀದೇವಿಗೆ ವರದಕ್ಷಿಣೆ ಕಿರುಕುಳ ಆರೋಪ ಪ್ರಕರಣ ಸಂಬಂಧ ಆರೋಪಿಗಳನ್ನು ಖುಲಾಸೆಗೊಳಿಸಿ ಜಿಲ್ಲಾ ನ್ಯಾಯಾಲಯ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಮತ್ತು ದೂರುದಾರರಾದ ಲಕ್ಷ್ಮೀ ದೇವಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಹೆಚ್.ಬಿ. ಪ್ರಭಾಕರ್ ಶಾಸ್ತ್ರಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಪ್ರಕರಣದ ಹಿನ್ನೆಲೆ:1998ರಲ್ಲಿ ಅಭಿನಯ ಅಣ್ಣ ಶ್ರೀನಿವಾಸ್ ಲಕ್ಷ್ಮೀದೇವಿ ಎಂಬುವವರನ್ನು ವಿವಾಹವಾಗಿದ್ದು, ಮದುವೆ ಸಂದರ್ಭದಲ್ಲಿ ವರಕ್ಷಿಣೆ ರೂಪದಲ್ಲಿ 80 ಸಾವಿರ ರೂ. ನಗದು, 250 ಗ್ರಾಂ ಚಿನ್ನಾಭರಣ ಪಡೆದಿದ್ದರು. ನಂತರವೂ 1 ಲಕ್ಷಕ್ಕೆ ಬೇಡಿಕೆ ಇಟ್ಟು 20 ಸಾವಿರ ಪಡೆದಿದ್ದರು. ಇದಾದ ಬಳಿಕ ವರದಕ್ಷಿಣೆ ಕಿರುಕುಳ ನೀಡಿ ಪೋಷಕರ ಮನೆಗೆ ಕಳುಹಿಸಿದ್ದರು.
ಇದರಿಂದ ಬೇಸತ್ತಿದ್ದ ಲಕ್ಷ್ಮೀದೇವಿ ಅವರು ಪದೇ ಪದೆ ಹಣ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು 2002ರಲ್ಲಿ ಅಭಿನಯ ಕುಟುಂಬದ ವಿರುದ್ಧ ಚಂದ್ರ ಲೇಔಟ್ ಪೊಲೀಸ್ ಠಾಣೆಗೆ ದೂರು ನಿಡಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ನ್ಯಾಯಾಲಯಕ್ಕೆ ಅರೋಪ ಪಟ್ಟಿ ಸಲ್ಲಿಸಿದ್ದರು. ಇದರ ಆಧಾರದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆರೋಪಿಗಳಿಗೆ ತಲಾ ಎರಡು ವರ್ಷಗಳ ಕಾಲದ ಶಿಕ್ಷೆ ವಿಧಿಸಿತ್ತು. ಇದಾದ ಬಳಿಕ ಜಿಲ್ಲಾ ನ್ಯಾಯಾಲಯ ಆರೋಪಗಳನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಲಕ್ಷ್ಮೀದೇವಿ ಹಾಗು ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮೂವರು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿ ಆದೇಶಿಸಿದೆ. ಪ್ರಕರಣದ ಮೊದಲ ಆರೋಪಿ ಶ್ರೀನಿವಾಸ್ ಹಾಗೂ ಎರಡನೇ ಆರೋಪಿ ರಾಮಕೃಷ್ಣ ಸಾವನ್ನಪ್ಪಿರುವ ಹಿನ್ನೆಲೆ ಸದ್ಯ ಮೂವರಿಗೆ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಮೂರನೇ ಆರೋಪಿ ಜಯಮ್ಮಗೆ 5 ವರ್ಷ, ನಾಲ್ಕನೇ ಆರೋಪಿ ಚಲುವರಾಜುಗೆ ಮತ್ತು ಐದನೇ ಆರೋಪಿಯಾಗಿದ್ದ ಅಭಿನಯ ಅವರಿಗೆ 2 ವರ್ಷ ಶಿಕ್ಷೆ ವಿಧಿಸಿ ಆದೇಶಿಸಿದೆ.
ಇದನ್ನೂ ಓದಿ:ಸಾಯಿಧರಮ್ ತೇಜ್ 'ವಿರೂಪಾಕ್ಷ' ಸಿನಿಮಾದಲ್ಲಿ ಕನ್ನಡದ ಸಂಗೀತ ನಿರ್ದೇಶಕನ ಕಮಾಲ್