ವಿಧು ವಿನೋದ್ ಚೋಪ್ರಾ ಅವರ ಬಹುನಿರೀಕ್ಷಿತ ಚಿತ್ರ '12th ಫೇಲ್' ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ವಿಕ್ರಾಂತ್ (Vikrant Massey) ನಟನೆಯ ಸಿನಿಮಾ ಮತ್ತು ಕಂಗನಾ ರಣಾವತ್ ಅವರ ವೈಮಾನಿಕ ಸಾಹಸ ಚಿತ್ರ 'ತೇಜಸ್' ಒಂದೇ ದಿನ ತೆರೆಕಂಡಿದ್ದು, ಎರಡೂ ಚಿತ್ರಗಳ ಕಲೆಕ್ಷನ್ ಅಂಕಿ ಅಂಶ ಸಾಧಾರಣವಾಗಿದೆ. '12th ಫೇಲ್' ಗಳಿಕೆ ಇಂದು ಮತ್ತು ನಾಳೆ (ವಾರಾಂತ್ಯ) ಕೊಂಚ ಏರುವ ಸಾಧ್ಯತೆ ಇದೆ ಎಂದು ಸಿನಿ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, '12th ಫೇಲ್' ಸಿನಿಮಾ ತೆರೆಕಂಡ ಮೊದಲ ದಿನ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 1.10 ಕೋಟಿ ರೂಪಾಯಿ ಸಂಗ್ರಹಿಸಿದೆ. ಈ ಅಂಕಿ ಅಂಶ ಆರಂಭಿಕ ಅಂದಾಜಿನ ಎರಡು ಪಟ್ಟು ಹೆಚ್ಚು. ಸ್ಯಾಕ್ನಿಲ್ಕ್ ಆರಂಭಿಕ ಅಂದಾಜಿನ ಪ್ರಕಾರ, ಇಂದು (ಶನಿವಾರ) 1.75 ಕೋಟಿ ರೂಪಾಯಿ ಗಳಿಸುವ ಸಾಧ್ಯತೆ ಇದೆ. ಈ ಮೂಲಕ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಚಿತ್ರದ ಒಟ್ಟು ಕಲೆಕ್ಷನ್ (ಎರಡು ದಿನದ ಗಳಿಕೆ) 2.85 ಕೋಟಿ ರೂಪಾಯಿ ಆಗಲಿದೆ.
ನಟಿ ಕಂಗನಾ ರಣಾವತ್ ಅವರ ತೇಜಸ್ ಸಿನಿಮಾ ಕೂಡ ನಿನ್ನೆಯೇ ಬಿಡುಗಡೆ ಆಗಿದೆ. ವಿಕ್ರಾಂತ್ ಮಾಸ್ಸೆ ಅಭಿನಯದ ಚಿತ್ರಕ್ಕಿಂತ ತೇಜಸ್ ಹೆಚ್ಚು ಸದ್ದು ಮಾಡಲಿದೆ ಎಂದು ಊಹಿಸಲಾಗಿತ್ತು. ಆದಾಗ್ಯೂ, ವಿಧು ವಿನೋದ್ ಚೋಪ್ರಾ ನಿರ್ದೇಶನದ '12th ಫೇಲ್' ಸಿನಿಮಾ ಗಳಿಕೆ ವಿಚಾರದಲ್ಲಿ ಮುಂದಿದೆ. ತೇಜಸ್ ಸಿನಿಮಾ ಮೊದಲ ದಿನ ಭಾರತದಲ್ಲಿ 1.25 ಕೋಟಿ ರೂಪಾಯಿ ಗಳಿಸಿದೆ, ಎರಡನೇ ದಿನ 1.50 ಕೋಟಿ ರೂ. ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿದೆ.