ವಾಷಿಂಗ್ಟನ್(ಅಮೆರಿಕ):ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಸ್ಯನಟ ಕ್ರಿಸ್ ರಾಕ್ ಅವರ ಕೆನ್ನೆಗೆ ಹೊಡೆದ ನಂತರ ಕ್ಷಮೆ ಕೇಳಿದ್ದ ನಟ ವಿಲ್ ಸ್ಮಿತ್ ಅವರು ಶುಕ್ರವಾರ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸಸ್ನ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ಅನ್ನು ಅಕಾಡೆಮಿ ಮೆಂಬರ್ಶಿಪ್ ಎಂದೂ ಕರೆಯಲಾಗುತ್ತದೆ.
ಘಟನೆಗೆ ಸಂಬಂಧಿಸಿದಂತೆ ಅಕಾಡೆಮಿ ಕೈಗೊಂಡ ಶಿಸ್ತಿನ ವಿಚಾರಣೆಗೆ ಈಗಾಗಲೇ ಪ್ರತಿಕ್ರಿಯೆ ನೀಡಿದ್ದೇನೆ. ಅಕಾಡೆಮಿ ನನ್ನ ವಿರುದ್ಧ ಕೈಗೊಂಡಿರುವ ಕ್ರಮಗಳನ್ನು ನಾನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದೇನೆ. 94ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಡೆದ ಘಟನೆ ಆಘಾತಕಾರಿ, ನೋವಿನ ಮತ್ತು ಕ್ಷಮಿಸಲಾಗದಂತದ್ದು ಎಂದು ವಿಲ್ ಸ್ಮಿತ್ ಎಎನ್ಐಗೆ ತಿಳಿಸಿದರು. ಕ್ರಿಸ್ ರಾಕ್ ಸೇರಿದಂತೆ ನಾನು ನೋಯಿಸಿದವರ ಪಟ್ಟಿ ದೊಡ್ಡದಾಗಿದೆ ಎಂದು ವಿಲ್ ಸ್ಮಿತ್ ಭಾವುಕರಾಗಿದ್ದಾರೆ.
ಕ್ರಿಸ್ ರಾಕ್ ಮಾತ್ರವಲ್ಲ, ಅವರ ಕುಟುಂಬ, ನನ್ನ ಅನೇಕ ಆತ್ಮೀಯ ಸ್ನೇಹಿತರು ಮತ್ತು ಪ್ರೀತಿಪಾತ್ರರು ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಜರಿದ್ದವರೆಲ್ಲರಿಗೂ ನಾನು ನೋವು ಮಾಡಿದ್ದೇನೆ. ಅಕಾಡೆಮಿ ನನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನು ಹುಸಿಗೊಳಿಸಿದ್ದೇನೆ. ಬೇರೆ ಪ್ರಶಸ್ತಿ ವಿಜೇತರು, ನಾಮನಿರ್ದೇಶಿತರು ತಮ್ಮ ಸಾಧನೆಗಾಗಿ ಸಂತಸಪಡುವ ಪ್ರಶಸ್ತಿ ಸ್ವೀಕರಿಸಿ, ಸಂತಸಪಡುವ ಅವಕಾಶವನ್ನು ಕಳೆದುಕೊಳ್ಳುವಂತೆ ಮಾಡಿದ್ದೇನೆ ಎಂದು ಸ್ಮಿತ್ ಪಶ್ಚಾತ್ತಾಪ ಪಟ್ಟಿದ್ದಾರೆ.