ಮುಂಬೈ:ಅಕ್ಷಯ್ಕುಮಾರ್ ಅವರ ಪತ್ನಿ, ನಟಿ ಟ್ವಿಂಕಲ್ ಖನ್ನಾ ಅವರು ಬ್ರಾಹ್ಮಣ ಪಂಡಿತರ ಹತ್ಯಾಕಾಂಡದ ಬಗ್ಗೆ ರೂಪಿಸಲಾದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ವ್ಯಂಗ್ಯವಾಡಿದ್ದಕ್ಕೆ ನೆಟ್ಟಿಗರು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. 'ಪಂಡಿತರ ಹತ್ಯಾಕಾಂಡದ ಕುರಿತು ಸಂವೇದನೆ ಹೊಂದಿರಬೇಕು' ಎಂಬ ಸಲಹೆಯನ್ನು ಸಹ ನೀಡಿದ್ದಾರೆ.
ಏಪ್ರಿಲ್ 3 ರಂದು ಬಾಲಿವುಡ್ ನಟಿ ಟ್ವಿಂಕಲ್ ಖನ್ನಾ ಅವರು ಪ್ರಮುಖ ದಿನಪತ್ರಿಕೆಯೊಂದಕ್ಕೆ "ದಿ ಕಾಶ್ಮೀರ್ ಫೈಲ್ಸ್" ಚಿತ್ರದ ಬಗ್ಗೆ ಅಂಕಣ ಬರೆದಿದ್ದರು. ಅದರಲ್ಲಿ 'ದಿ ಕಾಶ್ಮೀರ್ ಫೈಲ್ಸ್ ಹಿಟ್ ಆಯ್ತು, ನಾನು ನೇಲ್ ಫೈಲ್ಸ್ ಸಿನಿಮಾ ಮಾಡ್ತೀನಿ' ಎಂದು ವ್ಯಂಗ್ಯವಾಡಿದ ರೀತಿಯಲ್ಲಿ ಅಂಕಣದ ತಲೆಬರಹ ನೀಡಲಾಗಿದೆ. ಇದು ನೆಟಿಜನ್ಗಳನ್ನು ಕೆರಳಿಸಿದೆ.
ಈ ಅಂಕಣದ ತಲೆಬರಹ ಮತ್ತು ವಿಷಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಅಶೋಕ್ ಪಂಡಿತ್ ಎಂಬುವವರು 'ಮೇಡಂ ನೀವು ತುಂಬಾ ತಡ ಮಾಡಿದಿರಿ. ಕಾಶ್ಮೀರಿ ಪಂಡಿತರ ನರಮೇಧದ ಈ ಚಿತ್ರ ಇಸ್ಲಾಮಿಕ್ ಭಯೋತ್ಪಾದನೆಯ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಿದೆ. 7 ಲಕ್ಷ ಕಾಶ್ಮೀರಿ ಪಂಡಿತರ ನರಮೇಧದ ಬಗ್ಗೆ ಇಷ್ಟೊಂದು ಸಂವೇದನಾಶೀಲತೆ ಮರೆಯಬೇಡಿ' ಎಂದು ಬುದ್ಧಿ ಹೇಳಿದ್ದಾರೆ.