ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾ ನೋಡಬೇಕು ಎಂದರೆ ಪ್ರೇಕ್ಷಕರು ಪ್ರತಿ ಟಿಕೆಟ್ಗೆ ದುಬಾರಿ ಬೆಲೆ ತೆರಬೇಕಾಗುತ್ತದೆ. ಹೈ-ಬಜೆಟ್ ಸಿನಿಮಾಗಳ ಟಿಕೆಟ್ ಬೆಲೆ ಸಾವಿರ ರೂಪಾಯಿ ದಾಟಿದ ಉದಾಹರಣೆಯೂ ಸಾಕಷ್ಟಿದೆ. ಇದರಿಂದ ಬಡವರಿಗೆ ಮತ್ತು ಮಧ್ಯಮವರ್ಗದ ಸಿನಿಪ್ರಿಯರು ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾ ನೋಡುವುದು ದೂರದ ಮಾತು. ಆದರೆ, ಇಂದು ಅವರಿಗೋಸ್ಕರ ಬಂಪರ್ ಆಫರ್ ನೀಡಲಾಗಿದೆ.
ಇಂದು ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾ ನೋಡಿದರೆ ಪ್ರತಿ ಟಿಕೆಟ್ ಬೆಲೆ ಕೇವಲ 75 ರೂಪಾಯಿ ಇರಲಿದೆ. ಸೆ.23ರಂದು (ಇಂದು) ‘ರಾಷ್ಟ್ರೀಯ ಸಿನಿಮಾ ದಿನ‘ ಆಚರಿಸಲಾಗುತ್ತಿದ್ದು, ಈ ಪ್ರಯುಕ್ತ ಕೇವಲ 75 ರೂಪಾಯಿಗೆ ಟಿಕೆಟ್ ಮಾರಾಟ ಮಾಡಲು ಎಂಎಐ ನಿರ್ಧರಿಸಿದೆ.
‘ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ’ ವತಿಯಿಂದ ಈ ಭರ್ಜರಿ ಆಫರ್ ಅನ್ನು ಪ್ರೇಕ್ಷಕರಿಗೆ ನೀಡಲಾಗುತ್ತಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಪಿವಿಆರ್, ಐನಾಕ್ಸ್, ಸಿನಿಪೊಲಿಸ್ ಸೇರಿದಂತೆ ಹಲವು ಮಲ್ಟಿಪ್ಲೆಕ್ಸ್ ಕಂಪನಿಗಳು ಕೈ ಜೋಡಿಸಿವೆ. ದೇಶಾದ್ಯಂತ ಇರುವ ಅಂದಾಜು 4 ಸಾವಿರ ಸ್ಕ್ರೀನ್ಗಳಲ್ಲಿ ಈ ಆಫರ್ ನೀಡಲಾಗುತ್ತಿದೆ. ಈ ಸುದ್ದಿ ಕೇಳಿ ಸಿನಿಪ್ರಿಯರು ಖುಷಿಪಟ್ಟಿದ್ದಾರೆ.
ಕೊರೊನಾ ನಂತರ ಜನರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವ ಟ್ರೆಂಡ್ ಕಮ್ಮಿ ಆಗಿದೆ. ಕೆಲವೇ ಕೆಲವು ಚಿತ್ರಗಳಿಗೆ ಮಾತ್ರ ಜನರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಉಳಿದಂತೆ ಅನೇಕ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸೊರಗಿವೆ. ಕೊವಿಡ್ ನಂತರದ ಈ ಕಾಲಘಟ್ಟದಲ್ಲಿ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರದತ್ತ ಸೆಳೆಯಲು ಈ ರೀತಿ ಆಫರ್ ನೀಡಲಾಗುತ್ತಿದೆ. ಇಂದು ಇಡೀ ದೇಶಾದ್ಯಂತ ಇರುವ ಮಲ್ಟಿಪ್ಲೆಕ್ಸ್ನಲ್ಲಿ ‘ರಾಷ್ಟ್ರೀಯ ಸಿನಿಮಾ ದಿನ’ವನ್ನು ಆಚರಿಸಲಾಗುತ್ತಿದೆ.