ಲಾಸ್ ಏಂಜಲೀಸ್:ಸಂಗೀತ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿಯಾದ "ಗ್ರ್ಯಾಮಿ" ಪ್ರದಾನ ಮಾಡಲಾಗಿದ್ದು, ಅಮೆರಿಕದಲ್ಲಿ ಜನಿಸಿದ ಕನ್ನಡಿಗ ರಿಕಿ ಕೇಜ್ಗೆ ಮೂರನೇ ಬಾರಿಗೆ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ರಿಕಿ ಅವರ 'ಡಿವೈನ್ ಟೈಡ್ಸ್' ಆಲ್ಬಮ್‌ಗೆ ಗ್ರ್ಯಾಮಿ ಪ್ರಶಸ್ತಿ ದೊರೆತಿದೆ. ಬ್ರಿಟಿಷ್ ರಾಕ್ ಬ್ಯಾಂಡ್ ದಿ ಪೊಲೀಸ್‌ನ ಡ್ರಮ್ಮರ್ ಸ್ಟೀವರ್ಟ್ ಕೋಪ್ಲ್ಯಾಂಡ್ ಜೊತೆಗೆ ಪ್ರಶಸ್ತಿ ಹಂಚಿಕೊಂಡಿದ್ದಾರೆ. ತಮಗೆ ದೊರೆತ ಪ್ರಶಸ್ತಿ ಹಾಗೂ ಗೌರವವನ್ನು ದೇಶಕ್ಕೆ ಅರ್ಪಿಸಿರುವ ರಿಕಿ ಪ್ರತಿಷ್ಠಿತ ಪ್ರಶಸ್ತಿಯನ್ನು ಮತ್ತೊಮ್ಮೆ ಪಡೆದುಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಲಾಸ್ ಏಂಜಲೀಸ್‌ನಲ್ಲಿ ಇಂದು ನಡೆದ ಸಮಾರಂಭದಲ್ಲಿ ವಿಶ್ವದ ದಿಗ್ಗಜ ಸಂಗೀತ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮೂರನೇ ಬಾರಿಗೆ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದ ರಿಕಿ ಕೇಜ್ ಅವರು, ರಾಕ್ ಲೆಜೆಂಡ್ ಸ್ಟೀವರ್ಟ್ ಕೋಪ್ಲ್ಯಾಂಡ್ ಅವರೊಂದಿಗೆ ಕಾಣಿಸಿಕೊಂಡರು. ರಿಕಿ ಕೇಜ್ ಅವರ 'ಡಿವೈನ್ ಟೈಡ್ಸ್' ಆಲ್ಬಮ್ ಅತ್ಯುತ್ತಮ ಆಡಿಯೊ ಆಲ್ಬಮ್ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆಯಿತು. ಕಳೆದ ವರ್ಷವೂ ಇದೇ ಆಲ್ಬಂ ಅತ್ಯುತ್ತಮ ಹೊಸ ಕಾಲದ ಆಲ್ಬಂ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ರಿಕ್ಕಿ ಕೇಜ್, ನೆರೆದಿದ್ದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. "ನನ್ನ ಡಿವೈನ್ ಟೈಡ್ಸ್ ಆಲ್ಬಂಗಾಗಿ ಎರಡನೇ ಗ್ರ್ಯಾಮಿ ಪ್ರಶಸ್ತಿಯನ್ನು ಸ್ವೀಕರಿಸಲು ಖುಷಿಯಾಗುತ್ತಿದೆ. ಭಾರತೀಯ ಸಂಗೀತ ರಂಗಕ್ಕೆ ಈ ಪ್ರಶಸ್ತಿಯನ್ನು ಅರ್ಪಿಸುವೆ ಎಂದು ಹೇಳಿದರು. ಮಹಿಳಾ ವಿಭಾಗದಲ್ಲಿ ಗಾಯಕಿ ಬೆಯಾನ್ಸ್ ಗ್ರ್ಯಾಮಿ ಪ್ರಶಸ್ತಿ ಇತಿಹಾಸದಲ್ಲೇ ದಾಖಲೆ ಸೃಷ್ಟಿಸಿದರು. ಅತಿ ಹೆಚ್ಚು ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದ ಮಹಿಳೆ ಎಂಬ ಇತಿಹಾಸ ಸೃಷ್ಟಿಸಿದರು. ಅವರು ಒಟ್ಟಾರೆ 32 ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದಕ್ಕೂ ಮೊದಲು ಹಂಗೇರಿಯನ್-ಬ್ರಿಟಿಷ್ ಸಂಗೀತಗಾರ್ತಿ ಜಾರ್ಜ್ ಸೋಲ್ಟಿ 31 ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದಿದ್ದರು.