ಕೋಲ್ಕತ್ತಾ (ಪಶ್ಚಿಮ ಬಂಗಾಳ) :ಪಶ್ಚಿಮ ಬಂಗಾಳ ಚಿತ್ರರಂಗದಲ್ಲಿ ಸರಣಿ ಆತ್ಮಹತ್ಯೆಗಳು ಸಂಚಲನ ಮೂಡಿಸುತ್ತಿವೆ. ಯುವ ನಟಿ ಮತ್ತು ರೂಪದರ್ಶಿ ಮಂಜುಷಾ ನಿಯೋಗಿ ಶುಕ್ರವಾರ ಕೋಲ್ಕತ್ತಾದ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಂಜುಷಾ ಅವರ ಗೆಳತಿ, ನಟಿ ಬಿದಿಶಾ ಮಜುಂದಾರ್ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದರು.
ಸ್ನೇಹಿತೆಯ ಸಾವಿನಿಂದ ತೀವ್ರ ಖಿನ್ನತೆಗೆ ಒಳಗಾಗಿ ಮಂಜುಶಾ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮತ್ತೋರ್ವ ನಟಿ ಪಲ್ಲವಿ ಡೇ ಕೂಡ ಇದೇ ತಿಂಗಳ 15 ರಂದು ನೇಣಿಗೆ ಶರಣಾಗಿದ್ದರು. 12 ದಿನಗಳಲ್ಲಿ ಮೂವರು ಚಿತ್ರ ನಟಿಯರ ಸಾವಿನಿಂದಾಗಿ ಬಂಗಾಳ ಚಿತ್ರರಂಗ ಶೋಕ ಸಾಗರದಲ್ಲಿ ಮುಳುಗಿದೆ.
ಅನುಮಾನಾಸ್ಪದ ಸಾವು:ಜನಪ್ರಿಯ ಬಂಗಾಳಿ ಕಿರುತೆರೆ ನಟಿ ಪಲ್ಲವಿ ಡೇ ಅವರ ಮೃತದೇಹ ದಕ್ಷಿಣ ಕೋಲ್ಕತ್ತಾದ ಅಪಾರ್ಟ್‌ಮೆಂಟ್‌ನಲ್ಲಿ ಮೇ 15 ರಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಲ್ಲವಿ ಏಪ್ರಿಲ್‌ನಲ್ಲಿ ದಕ್ಷಿಣ ಕೋಲ್ಕತ್ತಾದ ಗಾರ್ಫಾ ಪ್ರದೇಶದಲ್ಲಿ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ಪಡೆದಿದ್ದರು ಎನ್ನಲಾಗ್ತಿದೆ. ತಮ್ಮ ಗೆಳೆಯನ ಜೊತೆ ವಾಸವಿದ್ದರು. ಸುದ್ದಿಗಾರರಿಗೆ ಮಾಹಿತಿ ನೀಡಿರುವ ಅಪಾರ್ಟ್‌ಮೆಂಟ್‌ನ ಕೇರ್‌ಟೇಕರ್, ಮಲಗುವ ಕೋಣೆಯಲ್ಲಿ ಅವರು ನೇಣು ಬಿಗಿದುಕೊಂಡಿದ್ದಾರೆ ಎಂದು ತಿಳಿದ ತಕ್ಷಣ ಅವರ ಗೆಳೆಯ ನನ್ನನ್ನು ಜೋರಾಗಿ ಕೂಗಿ ಕರೆದರು. ನಂತರ ಇತರೆ ಮನೆಗೆಲಸದ ಸಿಬ್ಬಂದಿಯೊಂದಿಗೆ ಪಲ್ಲವಿ ಅವರ ಶವವನ್ನು ಕೆಳಗೆ ಇಳಿಸಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ತಿಳಿಸಿದರು.