ಇಂದೋರ್ ಪ್ರಕರಣದ ಬಳಿಕ ಖ್ಯಾತ ಚಿತ್ರ ನಿರ್ಮಾಪಕಿ ಏಕ್ತಾ ಕಪೂರ್ ಮತ್ತು ಅವರ ತಾಯಿ ಶೋಭಾ ಕಪೂರ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಹಾರದ ಬೇಗುಸರಾಯ್ ನ್ಯಾಯಾಲಯದಿಂದ ಇಬ್ಬರ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಪ್ರಕರಣವು ಒಂದು ವರ್ಷ ಹಳೆಯದಾಗಿದ್ದು, ಇದು ಏಕ್ತಾ ಕಪೂರ್ ಅವರ ವೆಬ್ ಸರಣಿ 'XXX' ಸೀಸನ್ 2 ಗೆ ಸಂಬಂಧಿಸಿದೆ. ಈ ವೆಬ್ ಸಿರೀಸ್‌ನಲ್ಲಿ ಭಾರತೀಯ ಸೈನಿಕರ ಬಟ್ಟೆ ಹರಿಯುವ ಮತ್ತು ಧರ್ಮ ನಿಂದನೆಯಂತಹ ದೃಶ್ಯಗಳು ಕಂಡು ಬಂದಿವೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ಕಳೆದ ವರ್ಷ ಬಿಹಾರದ ಬೇಗುಸರಾಯ್ ನ್ಯಾಯಾಲಯದಲ್ಲಿ ಈ ಇಬ್ಬರೂ ನಿರ್ಮಾಪಕರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ವೆಬ್ ಸಿರೀಸ್‌ನಲ್ಲಿ ಕೆಲವು ಆಕ್ಷೇಪಾರ್ಹ ದೃಶ್ಯಗಳನ್ನು ತೋರಿಸಲಾಗಿದ್ದು, ಸೈನಿಕರ ಭಾವನೆಗೆ ಧಕ್ಕೆ ತಂದಿದೆ ಎಂದು ಆರೋಪಿಸಲಾಗಿದೆ. 'ಟ್ರಿಪಲ್ ಎಕ್ಸ್ ಸೀಸನ್ 2' ವೆಬ್ ಸರಣಿಯ ಸಂಚಿಕೆಯಲ್ಲಿ ಸೈನಿಕನು ಗಡಿಯಲ್ಲಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿರುವಾಗ, ಅವನ ಹೆಂಡತಿ ಇತರ ಪುರುಷರೊಂದಿಗೆ ಅಕ್ರಮ ಸಂಬಂಧವನ್ನು ಹೊಂದುತ್ತಾಳೆ ಎಂದು ತೋರಿಸಲಾಗಿದೆ. ಇಷ್ಟೇ ಅಲ್ಲ, ಈ ಪತ್ನಿಯರು ಮನೆಗೆ ಬೇರೆ ಗಂಡಸರನ್ನು ಕರೆಸಿ ತಮ್ಮ ಮಿಲಿಟರಿ ಗಂಡನ ಸಮವಸ್ತ್ರ ಧರಿಸಿ ಸಂಸಾರ ನಡೆಸುತ್ತಾರೆ ಎಂದು ಚಿತ್ರೀಕರಿಸಲಾಗಿದೆ.
ಬಿಹಾರದ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಶಂಭುಕುಮಾರ್ ಅವರು ವರ್ಷದ ಹಿಂದೆ ಪ್ರಕರಣ ದಾಖಲಿಸಿದ್ದರು. ಈ ಸರಣಿಯಲ್ಲಿ ತೋರಿಸಿರುವ ಈ ದೃಶ್ಯದಿಂದ ನನಗೆ ತುಂಬಾ ನೋವಾಗಿದೆ ಎಂದು ಶಂಭು ಕುಮಾರ್ ಹೇಳಿದ್ದಾರೆ. ಅಲ್ಲಿ ಭಾರತೀಯ ಸೈನಿಕರು ತಮ್ಮನ್ನು ತಾವು ಅಪಾಯಕ್ಕೆ ಸಿಲುಕಿಸಿಕೊಂಡು ದೇಶಕ್ಕೆ ಸೇವೆ ಸಲ್ಲಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರ ಮತ್ತು ಅವರ ಕುಟುಂಬವನ್ನು ಸಂಪೂರ್ಣ ಗೌರವದಿಂದ ನೋಡಬೇಕು. ಆದರೆ ಏಕ್ತಾ ತನ್ನ ವೆಬ್ ಸಿರೀಸ್‌ನಲ್ಲಿ ಬೇರೆಯದನ್ನೇ ತೋರಿಸಿದ್ದಾರೆ ಎಂದು ದೂರಿದ್ದರು.