ನವದೆಹಲಿ:ಲೋಕಸಭಾ ಚುನಾವಣೆ ಆರಂಭಕ್ಕೆ ಇನ್ನೆರಡು ದಿನಗಳಷ್ಟೇ ಬಾಕಿ ಇದ್ದು ಪ್ರಧಾನಿ ಮೋದಿ ಈನಾಡು ಗ್ರೂಪ್ಗೆ ಸಂದರ್ಶನ ನೀಡಿದ್ದು, ತಮ್ಮ ಪಕ್ಷ, ಚುನಾವಣಾ ಪ್ರಣಾಳಿಕೆಯ ಬಗ್ಗೆ ಮಾತನಾಡಿದ್ದಾರೆ.
ಪ್ರಶ್ನೆ 1: ನಿಮ್ಮ ಸರ್ಕಾರದ ಅತ್ಯಂತ ದೊಡ್ಡ ಸಾಧನೆ ಏನು?
ಉತ್ತರ:ಎಲ್ಲ ವರ್ಗವನ್ನೂ ಸುಧಾರಣೆಗೊಳಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಿದ್ದೇವೆ. ಈ ವಿಚಾರದಲ್ಲಿ ಯಾವುದೇ ರಾಜಿಯಾಗಿಲ್ಲ. ಸುಧಾರಣೆ, ಸಾಧನೆ ಮತ್ತು ರೂಪಾಂತರ ಧ್ಯೇಯವಾಗಿಟ್ಟುಕೊಂಡಿದ್ದೇವೆ. ಚುನಾವಣೆಯ ವೇಳೆ ಸಾಮಾನ್ಯವಾಗಿ ಸರ್ಕಾರಗಳು ಒಂದೆರಡು ಕ್ಷೇತ್ರಗಳಿಗೆ ಮಾತ್ರ ಒತ್ತು ನೀಡುತ್ತವೆ. ಹಿಂದಿನ ಯುಪಿಎ ಸರ್ಕಾರ ಇದನ್ನೇ ಮಾಡಿತ್ತು.
ದೇಶದ ಜನತೆಯ ಒಳಿತಿಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ. ನನ್ನ ಪ್ರಕಾರ, ದೇಶದ ಸುಲಲಿತವಾಗಿ ಮುನ್ನಡೆಯಲು ಎಲ್ಲ ಸಮಸ್ಯೆಗಳನ್ನೂ ನಿರ್ದಿಷ್ಟ ಸಮಯದೊಳಗೆ ಬಗೆಹರಿಸುವ ಅನಿವಾರ್ಯತೆ ಇದೆ.
ಪ್ರಶ್ನೆ 2: ಐದು ವರ್ಷದ ಆಡಳಿತದಲ್ಲಿ ನಿಮಗೆ ತೃಪ್ತಿ ನೀಡಿದ ಸುಧಾರಣೆ ಯಾವುದು?
ಉತ್ತರ:ಬಿಜೆಪಿ ಅಧಿಕಾರಕ್ಕೇರುವ ಮುನ್ನ ದೇಶದ ಜನತೆ ಬರೀ ಹಗರಣ, ಭ್ರಷ್ಟಾಚಾರದ ಸುದ್ದಿಗಳನ್ನೇ ಕೇಳುತ್ತಿದ್ದರು. ಆದರೆ ಸದ್ಯ ಜನತೆಗೆ ಸರ್ಕಾರದ ಮೇಲೆ ವಿಶ್ವಾಸ ಮೂಡಿದೆ. ಈ ಬದಲಾವಣೆ ಹಾಗೂ ನಂಬಿಕೆಯೇ ನನಗೆ ಸಾಕಷ್ಟು ತೃಪ್ತಿನ ನೀಡಿದೆ.
ಪ್ರಶ್ನೆ 3: ಮಹಾಘಟಬಂಧನ್ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಉತ್ತರ:ನಾನು ಮೊದಲ ಬಾರಿಗೆ ಪ್ರಧಾನಿ ಹುದ್ದೆ ಏರಿದ್ದೆ. ಕಳೆದ ಐದು ವರ್ಷದಲ್ಲಿ ನನ್ನ ಕೆಲಸಗಳನ್ನು ಜನತೆ ನೋಡಿದ್ದಾರೆ. ಮೂರು ದಶಕಗಳ ಬಳಿಕ ದೇಶದಲ್ಲಿ ಸ್ಥಿರ ಆಡಳಿತ ನಾವು ನೀಡಿದ್ದೇವೆ. ಜನತೆಗೂ ಸಹ ಸದೃಢ ಹಾಗೂ ಸ್ಥಿರ ಸರ್ಕಾರದ ಅಗತ್ಯ ಇದೆ ಎನ್ನುವುದು ಅರಿವಾಗಿದೆ. ಈ ಎಲ್ಲಾ ಕಾರಣಗಳಿಂದ ಮಹಾಘಟಬಂಧನ್ಗೆ ಜನತೆ ಮಣೆ ಹಾಕಲ್ಲ, ಯಾಕೆಂದರೆ ಸದ್ಯ ಒಗ್ಗಟ್ಟಾಗಿರುವವರ ಸಿದ್ಧಾಂತಗಳು ಭಿನ್ನವಾಗಿವೆ.
ಪ್ರಶ್ನೆ 4: ಕೃಷಿ ವಲಯದ ಬಿಕ್ಕಟ್ಟು ಹಾಗೂ ನಿರುದ್ಯೋಗಗಳು ಚುನಾವಣೆಯ ಮೇಲೆ ಪರಿಣಾಮ ಬೀರಲಿದೆಯೇ?
ಉತ್ತರ:ಪ್ರಸ್ತುತ ಕಾಲಘಟ್ಟದಲ್ಲಿ ಜನರನ್ನು ಮೂರ್ಖರನ್ನಾಗಿಸುವುದು ಅಸಾಧ್ಯದ ಮಾತು. ಇದು ಮಾಹಿತಿ ಯುಗ, ಎಲ್ಲವೂ ಕ್ಷಣಮಾತ್ರದಲ್ಲಿ ಪಡೆದುಕೊಳ್ಳಬಹುದು. ಹಿಂದಿನ ಕಾಲದಂತೆ ರಾಜಕಾರಣಿಗಳು ಜನತೆಯನ್ನು ಮೂರ್ಖರನ್ನಾಗಿಸುತ್ತಿದ್ದರು, ಆದರೆ ಅದು ಈಗ ಸಾಧ್ಯವಿಲ್ಲ. ಎಲ್ಲ ಮಾಹಿತಿಗಳನ್ನು ಬೆರಳ ತುದಿಯಲ್ಲಿ ಪಡೆಯುವ ಯುಗದಲ್ಲಿ ನಾವಿದ್ದೇವೆ.
ಪ್ರಶ್ನೆ 5: ಕೃಷಿ ವಲಯದ ಸಮಸ್ಯೆಗಳನ್ನು ಯಾವ ರೀತಿ ನಿಭಾಯಿಸುತ್ತೀರಿ ಮತ್ತು ರೈತರ ಹೋರಾಟದ ಬಗ್ಗೆ ಏನು ಹೇಳುತ್ತೀರಿ?
ಉತ್ತರ:ನಾವು ಸ್ವಾಮಿನಾಥನ್ ಆಯೋಗದ ವರದಿಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದೇವೆ. ಕೃಷಿ ಉತ್ಪನ್ನಗಳಿಗೆ ಒಂದೂವರೆ ಪಟ್ಟು ಹೆಚ್ಚಿನ ವೆಚ್ಚ ನೀಡಲಿದ್ದೇವೆ. ಈ ಹಿಂದಿನ ಸರ್ಕಾರಗಳಿಗಿಂತ ಹೆಚ್ಚಾಗಿ ರೈತರ ಬೆಳೆಗಳನ್ನು ಖರೀದಿ ಮಾಡುತ್ತಿದ್ಧೇವೆ. ಆಧುನಿಕ ತಂತ್ರಜ್ಞಾನಗಳ ಬಳಕೆಗೆ ಹೊಸ ಹೊಸ ಯೋಜನೆ ಜಾರಿಗೊಳಿಸಿದ್ದೇವೆ.