ಕಲಬುರಗಿ:ಜಿಲ್ಲೆಗಾಗಿ ಕಳೆದ 45 ವರ್ಷದಲ್ಲಿ ಮಲ್ಲಿಕಾರ್ಜುನ ಖರ್ಗೆ ಏನೂ ಮಾಡಿಲ್ಲ ಎಂದು ಕಾಂಗ್ರೆಸ್ ತ್ಯಜಿಸಿ ಬಿಜೆಪಿಯಿಂದ ಕಣಕ್ಕಿಳಿದಿರುವ ಕಲಬುರಗಿ ಕ್ಷೇತ್ರದ ಅಭ್ಯರ್ಥಿ ಉಮೇಶ್ ಜಾಧವ್ ವಾಕ್ಸಮರ ನಡೆಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜಾಧವ್ ಅಬ್ಬರದ ಪ್ರಚಾರ ಕೈಗೊಂಡರು. ಅವರು ಭಂಕೂರ್, ಶಹಾಬಾದ್, ರಾವೂರ್, ಇಂಗಳಗಿ, ವಾಡಿ, ನಾಲವಾರ್ ಸೇರಿದಂತೆ ವಿವಿಧೆಡೆ ರೋಡ್ ಶೋ, ಬಹಿರಂಗ ಸಭೆ ನಡೆಸಿ ಮತಯಾಚಿಸಿದರು.
ಭಂಕೂರಿನಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಜಾಧವ್, ಖರ್ಗೆ 45 ವರ್ಷಗಳ ಆಡಳಿತದಲ್ಲಿ ಜಿಲ್ಲೆಗೆ ಏನೂ ಮಾಡಿಲ್ಲ. ಶಾಹಬಾದ ತಾಲೂಕು ಘೋಷಣೆಯಾದರೂ ಈವರೆಗೂ ಯಾವುದೇ ತಾಲೂಕು ಕಚೇರಿ ಅಲ್ಲಿ ಆರಂಭವಾಗಿಲ್ಲ ಎಂದು ಆರೋಪಿಸಿದರು.
ಇದೆ ವೇಳೆ ಮಾತನಾಡಿದ ಮಾಜಿ ಸಚಿವ ಮಾಲಿಕಯ್ಯಾ ಗುತ್ತೇದಾರ್, ಸಂವಿಧಾನದ ವಿಶೇಷ ಸ್ಥಾನಮಾನವಾಗಿರುವ 371ಜೆ ರೂವಾರಿ ವೈಜ್ಯನಾಥ ಪಾಟೀಲರು. ಆದರೆ ಖರ್ಗೆಯವರು, ಕೊನೆಯ ಎಸೆತಕ್ಕೆ ಬಂದು ವೈಡ್ ಬಾಲ್ ಮೇಲೆ ರನ್ ಗಳಿಸಿ ನಾನು ಮಾಡಿದೆ ಎನ್ನುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಪ್ರಚಾರ ಸಭೆಯ ವೇಳೆ ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ್ ಹೆಬ್ಬಾಳ, ವಾಲ್ಮೀಕ ನಾಯಕ್ ಉಪಸ್ಥಿತರಿದ್ದರು.