ಕರ್ನಾಟಕ

karnataka

ETV Bharat / elections

ಪ್ರಚಾರಕ್ಕೆ ಹೋದ ಸಚಿವರ ಮೇಲೆ ಹಲ್ಲೆ... ಇದು ಜಾಧವ್​​​ ಗೂಂಡಾಗಿರಿ ಎಂದ ಮೈತ್ರಿ ನಾಯಕರು - kannada news

ಪ್ರಚಾರಕ್ಕೆ ಹೋದ ಮೈತ್ರಿ ಸರ್ಕಾರದ ನಾಯಕರುಗಳಿಗೆ ದಾರಿಯಲ್ಲಿಯೇ ಅಡ್ಡಗಟ್ಟಿ ಹಲ್ಲೆ ಮಾಡಿರುವುದನ್ನ ಖಂಡಿಸಿ ಉಭಯ ಪಕ್ಷಗಳ ನಾಯಕರು ಪ್ರತಿಕ್ರಿಯಿಸಿದ್ದಾರೆ.

ಸಚಿವ ಪಿ.ಟಿ.ಪರಮೇಶ್ವರ್ ನಾಯಕ್

By

Published : Apr 11, 2019, 6:45 PM IST

ಕಲಬುರಗಿ: ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ದಿನದಿಂದ ದಿನಕ್ಕೆ ಕಾವೇರತೊಡಗಿದೆ. ಬಂಜಾರಾ ತಾಂಡಾಗಳಿಗೆ ಪ್ರಚಾರಕ್ಕೆ ತೆರಳಿದ್ದ ವೇಳೆ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ್​ ಕಾರಿನ ಮೇಲೆ ದಾಳಿ ಮಾಡಲಾಗಿದೆ. ಸುಭಾಷ್ ರಾಠೋಡ ಮೇಲೆ ಹಲ್ಲೆ ಮಾಡಿ, ‌ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಇದೀಗ ರಾಜಕೀಯ ಸ್ವರೂಪ ಪಡೆದುಕೊಳ್ಳಲಾರಂಭಿಸಿದೆ.

ತಾಂಡಾಗಳಲ್ಲಿ ಪ್ರಚಾರ ಮಾಡಿ ವಾಪಸ್ಸಾಗುವ ವೇಳೆ ರಸ್ತೆ ಮಧ್ಯದಲ್ಲಿ ತಡೆದು ಹಲ್ಲೆ ಮಾಡುತ್ತಿರುವುದನ್ನು ಮೈತ್ರಿ ನಾಯಕರು ಖಂಡಿಸಿದ್ದಾರೆ.

ಸಚಿವ ಪಿ.ಟಿ.ಪರಮೇಶ್ವರ್ ನಾಯಕ್

ಕಲಬುರಗಿಯಲ್ಲಿ ಜಂಟಿಯಾಗಿ ಮಾತನಾಡಿದ ಮುಖಂಡರು, ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಾರೆ. ಬಾಡಿಗೆ ಗೂಂಡಾಗಳಿಂದ ದಾಳಿ ಮಾಡಿಸಲಾಗಿದೆ. ದರೋಡೆಕೋರರ ರೀತಿಯಲ್ಲಿ ವಾಹನ ಅಡ್ಡಗಟ್ಟಿ ದಾಳಿ ಮಾಡಿಸುತ್ತಿದ್ದಾರೆ ಎಂದು ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ್​ ಆರೋಪಿಸಿದ್ದಾರೆ.

ಎಲ್ಲಿಯೂ ತಾಂಡಾಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿರೋಧ ವ್ಯಕ್ತವಾಗಿಲ್ಲ. ಆದರೆ ಉಮೇಶ್ ಜಾಧವ್ ತಮ್ಮ ಸಂಬಂಧಿಕರ ಮೂಲಕ ಗೂಂಡಾಗಿರಿ ಮಾಡಿಸುತ್ತಿದ್ದಾರೆ. ಈ ರೀತಿ ಗೂಂಡಾಗಿರಿ ಮಾಡುವ ಮೂಲಕ ಸಮಾಜಕ್ಕೆ ಕಪ್ಪು ಚುಕ್ಕೆ ತರುತ್ತಿದ್ದಾರೆ. ಮತಯಾಚನೆಗೆ ಅಡ್ಡಿಪಡಿಸಿ ಗೂಂಡಾಗಿರಿ, ದೌರ್ಜನ್ಯ ನಡೆಸುವುದು ಸರಿಯಲ್ಲ. ರೇವುನಾಯಕ ಬೆಳಮಗಿ ಬಿಜೆಪಿಯಿಂದ ಸ್ಪರ್ಧಿಸಿದಾಗ ಜಾಧವ್​ಗೆ ಸಮಾಜ ನೆನಪಾಗಲಿಲ್ಲವೆ ? ಅಂದು ಏಕೆ ಅವರು ಮಲ್ಲಿಕಾರ್ಜುನ ಖರ್ಗೆ ಪರವಾಗಿ ಪ್ರಚಾರ ಮಾಡಿದ್ದರು ಎಂದು ಪರಮೇಶ್ವರ ನಾಯ್ಕ್​​ ಪ್ರಶ್ನಿಸಿದ್ದಾರೆ. ನಮ್ಮ ನಮ್ಮ ಪಕ್ಷದ ಸಿದ್ಧಾಂತದ ಪ್ರಕಾರ ನಾವು ಪ್ರಚಾರ ಮಾಡುತ್ತಿದ್ದೇವೆ. ಅದನ್ನು ಪ್ರಶ್ನಿಸಲು ಇವರಾರು ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ಮಾತನಾಡಿರುವ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಇದೆಲ್ಲರ ನಿರ್ದೇಶಕ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಆಗಿದ್ದಾರೆ ಎಂದು ಆರೋಪಿಸಿದ್ದಾರೆ. ಡೈರೆಕ್ಷನ್ ಬಿಜೆಪಿ ಹೈಕಮಾಂಡ್​ನಿಂದ ಬರುತ್ತಿದೆ. ಚುನಾವಣಾ ಆಯೋಗವೂ ಒಳ ಒಪ್ಪಂದ ಮಾಡಿಕೊಂಡಂತೆ ಅನಿಸುತ್ತಿದೆ. ದಾಳಿಯ ವೇಳೆ ವಾಹನದ ಮೇಲೆ ಪೆಟ್ರೋಲ್ ಸುರಿಯುವ ಮಾತುಗಳನ್ನಾಡುತ್ತಿದ್ದಾರೆ. ಕಾಂಗ್ರೆಸ್ ಪರ ಪ್ರಚಾರಕ್ಕೆ ಹೋದವರನ್ನು ಇವರೇನು ಸಜೀವ ದಹನ ಮಾಡಬೇಕೆಂದಿದ್ದಾರೆಯೇ ಎಂದು ಪ್ರಿಯಾಂಕ್ ಪ್ರಶ್ನಿಸಿದ್ದಾರೆ.

ಪ್ರಕರಣ ದಾಖಲಿಸಲು ಹೋದರೆ ಹಿಂಬಾಗಿಲಿನಿಂದ ಕಾಂಪ್ರಮೈಸ್​ಗೆ ಬರುತ್ತಿದ್ದಾರೆ. ಚುನಾವಣೆ ಗೆಲ್ಲಲು ಸಮಾಜದಲ್ಲಿ ಬೆಂಕಿ ಹಚ್ಚೋ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ನರೇಂದ್ರ ಮೋದಿ ಗರಡಿಯಲ್ಲಿ ತರಬೇತಿ ಪಡೆದು ರವಿಕುಮಾರ್ ಇಂತಹ ಕೃತ್ಯಗಳನ್ನು ಮಾಡುಸುತ್ತಿದ್ದಾರೆ. ಇಂತಹ ಕೆಟ್ಟ ಕೆಲಸಗಳಿಗೆ ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ರೇವುನಾಯಕ ಬೆಳಮಗಿ, ಬಾಬುರಾವ್ ಚವ್ಹಾಣ ಹಾಗೂ ಕಾಂಗ್ರೆಸ್ ಮುಖಂಡ ಸುಭಾಷ್ ರಾಠೋಡ ಪ್ರಚಾರಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ, ತಮ್ಮ ಮೇಲೆ ನಡೆದ ಹಲ್ಲೆಯ ಕುರಿತು ವಿವರಿಸಿದರು.

ABOUT THE AUTHOR

...view details