ಬೆಂಗಳೂರು: ಸುಮಲತಾ ಗೆಲುವು ಮಂಡ್ಯ ಜಿಲ್ಲೆಯ ಜನರ ಗೆಲುವು ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಅಭ್ಯರ್ಥಿ ಕಣಕ್ಕಿಳಿಸುವಾಗ್ಲೂ ಸಿಎಂ ನಮ್ಮನ್ನ ಕರೆದಿಲ್ಲ. ಕುಮಾರಸ್ವಾಮಿಗೂ ನನಗೂ ಭಿನ್ನಾಭಿಪ್ರಾಯ ಇರೋದು ಗೊತ್ತಿರೋ ವಿಚಾರ. ಪಕ್ಷದ ಮುಖಂಡರಿಗೆ ಗೌರವ ಕೊಟ್ಟು ಉಪಚುನಾವಣೆಯಲ್ಲಿ ಶಿವರಾಮೇಗೌಡರಿಗೆ ಬೆಂಬಲ ಕೊಟ್ಟಿದ್ವಿ. ಇಷ್ಟಾದರೂ ಕುಮಾರಸ್ವಾಮಿ ನಮ್ಮನ್ನು ಕರೆದು ಮಾತುಕತೆ ಮಾಡಿಲ್ಲ. ಈ ಬಗ್ಗೆ ನಮ್ಮನ್ನ ನೆಗ್ಲೆಕ್ಟ್ ಮಾಡಿದ್ರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣಾ ಪ್ರಚಾರಕ್ಕೆ ಹೋಗದೇ ಇದ್ರೂ ಪಕ್ಷದ ಆದೇಶ ಪಾಲಿಸಿದ್ವಿ. ಆ ಕಾರಣಕ್ಕಾಗಿ ನಾವು ಅಂತರವನ್ನು ಕಾಯ್ದುಕೊಂಡಿದ್ದೆವು. ಈ ಕುರಿತಾಗಿ ಪಕ್ಷದ ಮುಖಂಡರ ಗಮನಕ್ಕೆ ತಂದಿದ್ವಿ. ನಾನು ಯಾವತ್ತೂ ಸಿಎಂ ವಿರುದ್ಧ ತೊಡೆ ತಟ್ಟೋ ಕೆಲಸ ಮಾಡಿಲ್ಲ. ಫಲಿತಾಂಶಕ್ಕೆ ಜನರ ತೀರ್ಮಾನ ಕಾರಣ. ನಾವು ನಿಖಿಲ್ ಕುಮಾರಸ್ವಾಮಿ ಜೊತೆ ಪ್ರಚಾರ ಮಾಡ್ತೀವಿ ಅಂತ ಒಪ್ಪಿಕೊಂಡಿಲ್ಲ. ನಮ್ಮನ್ನು ಮಾತನಾಡಿಸಿಲ್ಲ ಅಂತಾದರೆ ನಾವ್ಯಾಕೆ ಹೋಗಬೇಕು ಎಂದರು.
ದೇವೇಗೌಡರ ಸೋಲು ನನಗೆ ನೋವು ತಂದಿದೆ. ಹಿರಿಯ ನಾಯಕರು, ಮಾಜಿ ಪ್ರಧಾನಿ ಸೋಲಬಾರದಿತ್ತು. ದೇವೇಗೌಡರು ಹಾಸನದಲ್ಲಿ ನಿಲ್ಲಬೇಕು ಎಂಬುವುದು ಕಾಂಗ್ರೆಸ್ ಹಾಗೂ ಜನರ ತೀರ್ಮಾನವಾಗಿತ್ತು. ಆದರೆ ಕುಟುಂಬದ ಒತ್ತಡಕ್ಕೆ ಮಣಿದು ತುಮಕೂರಿನಲ್ಲಿ ನಿಲ್ಲಬೇಕಾಯಿತು. ಇದರಿಂದ ನನಗೆ ವೈಯಕ್ತಿಕವಾಗಿ ತೀವ್ರ ನೋವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಆದರೆ ಕುಮಾರಸ್ವಾಮಿ ಎಲ್ಲರ ಜೊತೆ ಒಳ್ಳೆಯ ಸಂಪರ್ಕ ಇಟ್ಟುಕೊಳ್ಳಬೇಕಿತ್ತು. ಹೀಗಿದ್ದಿದ್ದರೆ ಒಳ್ಳೆಯ ಫಲಿತಾಂಶ ಬರಲು ಸಾಧ್ಯ ಆಗ್ತಿತ್ತು ಎಂದು ಸ್ಪಷ್ಟಪಡಿಸಿದರು. ವಿಶ್ವನಾಥ್ಗೆ ಸಿದ್ದರಾಮಯ್ಯ ವಿರುದ್ಧ ಮಾತನಾಡುವ ಅಗತ್ಯ ಏನಿದೆ?. ಇವೆಲ್ಲವೂ ಮತದಾರರ ಮೇಲೆ ಪರಿಣಾಮ ಬೀರಿದೆ. ಪಕ್ಷದ ವೇದಿಕೆಯಲ್ಲಿ ಕೂತು ಚರ್ಚೆ ಮಾಡಬೇಕಿದೆ ಎಂದರು.