ಬೆಂಗಳೂರು:ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ 'ಮತ್ತೊಮ್ಮೆ ಮೋದಿ ಸರ್ಕಾರ' ಕಾರ್ಯಕ್ರಮದಲ್ಲಿ ಮೋದಿ ಘೋಷವಾಕ್ಯದೊಂದಿದೆ ಸೂರ್ಯ ಎಂಬ ಮತ್ತೊಂದು ಹೆಸರು ಉದಯವಾಗಿದ್ದು ವಿಶೇಷವಾಗಿತ್ತು.
ಅರಮನೆ ಮೈದಾನದಲ್ಲಿ 'ಮತ್ತೊಮ್ಮೆ ಮೋದಿ ಸರ್ಕಾರ' ಕಾರ್ಯಕ್ರಮ ಮತ್ತೊಮ್ಮೆ ಮೋದಿ ಪ್ರಧಾನಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವೇದಿಕೆ ಏರುತ್ತಿದ್ದ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯಗೆ ಜನಬೆಂಬಲ ವ್ಯಕ್ತವಾಯಿತು. ಕ್ಷಣಕ್ಷಣಕ್ಕೂ ಸೂರ್ಯ ಎಂಬ ಕೂಗು ಅಪಾರ ಜನಸ್ತೋಮದಿಂದ ಅಲೆಅಲೆಯಾಗಿ ಜೋರಾಗಿ ಕೇಳಿಬರುತ್ತಿತ್ತು. ಬೃಹತ್ ವೇದಿಕೆ ಮುಂಭಾಗ ಬಂದು ತೇಜಸ್ವಿ ಸೂರ್ಯ ಕೈಬೀಸಿದ ಬಳಿಕ, ತೇಜಸ್ವಿನಿ ಅನಂತಕುಮಾರ್ ಕಾಲಿಗೆರಗಿದರು. ಈ ವೇಳೆ ಜನರಿಂದ ಭಾರಿ ಕರತಾಡನ, ಕೇಕೆ ಕೇಳಿಬಂತು. ಮೋದಿ ಆಗಮಿಸಿದ ಸಂದರ್ಭವಂತೂ ಐದಾರು ನಿಮಿಷಗಳ ಜನರ ಕೂಗಾಟ ಎಲ್ಲೆ ಮೀರಿತ್ತು. ಈ ಸಂದರ್ಭ ಮೊಬೈಲ್ ಬೆಳಕು ಬೆಳಗಿ ಮೋದಿಗೆ ಜನ ವಿಶಿಷ್ಟವಾಗಿ ಸ್ವಾಗತ ಕೋರಿದರು.
ನಿಖಿಲ್ ಎಲ್ಲಿದ್ದಿಯಪ್ಪಾ..?
ಇದಕ್ಕೂ ಮುನ್ನ ಮೋದಿ ಆಗಮನಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಅಭಿಮಾನಿಗಳ ಕಡೆಯಿಂದ 'ನಿಖಿಲ್ ಎಲ್ಲಿದಿಯಪ್ಪಾ' ಎನ್ನುವ ಕೂಗು ಕೇಳಿ ಬಂತು. ಬೋಲೋ ಭಾರತ್ ಮಾತಾಕಿ, ಮೋದಿ ಮೋದಿ ಎನ್ನುವುದರ ಜೊತೆಜೊತೆಗೆ ನಿಖಿಲ್ ಪ್ರಸ್ತಾಪ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು. ಆರ್. ಅಶೋಕ್ ಕೂಡ ಈ ಮೇನಿಯಾಗೆ ಒಳಗಾಗಿ ಮೈಕ್‌ನಲ್ಲಿ 'ಎಲ್ಲಿದಿಯಪ್ಪಾ' ಅಂತ ಕೂಗಿದರು.
ಅಗಲಿದ ನಾಯಕರ ನೆನೆದ ಮೋದಿ
ಮೋದಿ ಭಾಷಣಕ್ಕೆ ತೆರಳುವ ಸಂದರ್ಭ ಎಲ್ಲಾ ನಾಯಕರು ಎದ್ದು ನಿಂತರು. ಮಾಜಿ ಸಿಎಂ ಹಾಗೂ ಮಾಜಿ ಕೇಂದ್ರ ಸಚಿವ ಎಸ್.ಎಂ. ಕೃಷ್ಣ ಅವರನ್ನು ಮೋದಿ ಕೂರುವಂತೆ ಸೂಚಿಸಿ ಗೌರವ ವ್ಯಕ್ತಪಡಿಸಿದರು. ಮಾತಿನುದ್ದಕ್ಕೂ ಮೋದಿ ಬೆಂಗಳೂರನ್ನು ಕೊಂಡಾಡಿದರು. ಬೆಂಗಳೂರು ನಿರ್ಮಾತೃ ಕೆಂಪೇಗೌಡರನ್ನು ನೆನೆದ ಬಳಿಕ ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತ್ ಕುಮಾರ್, ಶಾಸಕರಾಗಿದ್ದ ದಿ.ವಿಜಯ್ ಕುಮಾರ್ ಅವರನ್ನು ನೆನೆಯಲು ಮರೆಯಲಿಲ್ಲ.