ರಾಮನಗರ:ಮೋದಿ ಅಲೆಯ ಪರಿಣಾಮ ರಾಜ್ಯದಲ್ಲಿಯೂ ಕಾಂಗ್ರೆಸ್ ಸಂಪೂರ್ಣವಾಗಿ ನೆಲಕ್ಕಚ್ಚಿದೆ.ಆದ್ರೆ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದ ಡಿ.ಕೆ. ಸುರೇಶ್ ಕೈ ಪಕ್ಷದ ಗೌರವ ಕಾಪಾಡಿದ್ದಾರೆ.
ಮೈತ್ರಿ ಸರ್ಕಾರದ ಪವರ್‌ಫುಲ್ ಮಿನಿಸ್ಟರ್ ಡಿ.ಕೆ ಶಿವಕುಮಾರ್ ಸಹೋದರ ಈ ಭಾರಿಯೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಮೂರನೇ ಭಾರಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣ ಗೌಡ ವಿರುದ್ದ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಮೂರನೇ ಬಾರಿಗೆ ಗೆದ್ದಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರ ದಶಕಗಳಿಂದಲೂ ಕಾಂಗ್ರೆಸ್ ಭದ್ರಕೋಟೆ. ಮೂರು ಭಾರಿ ಜೆಡಿಎಸ್ ಗೆದ್ದಿರೋದು ಬಿಟ್ಟರೆ ಇಲ್ಲಿ ಬಿಜೆಪಿ ಗೆಲ್ಲಲು ಅವಕಾಶವೇ ಸಿಕ್ಕಿಲ್ಲ.ಈ ಭಾರಿ ಜೆಡಿಎಸ್ ಕೂಡ ಡಿ.ಕೆ.ಸುರೇಶ್ ಜೊತೆಗೂಡಿದ್ದು ಗೆಲುವು ಸಲೀಸಾಗಿದೆ. ವಿಶೇಷವಾಗಿ ಸಿಎಂ ಕೂಡ ಇವರ ಬೆಂಬಲಕ್ಕೆ ನಿಂತಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಗೆಲ್ಲಿಸಲು ಡಿ.ಕೆ ಬ್ರದರ್ಸ್ ಪಣ ತೊಟ್ಟಿದ್ದಲ್ಲದೇ ಡಿ.ಕೆ. ಸುರೇಶ್ ಸಂಪೂರ್ಣ ಜವಾಬ್ದಾರಿ ಹೊತ್ತು ಕೆಲಸ ಮಾಡಿದ್ದರು.
ಇದಿಷ್ಟೇ ಅಲ್ಲದೆ ತಳ ಮಟ್ಟದಿಂದಲೂ ಪಕ್ಷದ ಕಾರ್ಯಕರ್ತರ ವಿಶ್ವಾಸ ಪಡೆಯುವ ಜಾಣ್ಮೆ,ಜೊತೆಗೆ ಕೇಂದ್ರದ ಅನುದಾನ ಹಾಗೂ ನರೇಗಾ ಯೋಜನೆಯಲ್ಲಿ ಅತೀ ಹೆಚ್ಚು ಸಿಂಹಪಾಲು ಪಡೆದು ಗ್ರಾಮೀಣ ಭಾಗದ ರೈತರ ಮನಸ್ಸಿನಲ್ಲಿ ಸ್ಥಾನ ಪಡೆದಿರೋದು ಗೆಲುವಿಗೆ ಕಾರಣ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.