ಕಲಬುರಗಿ :ಚಿಂಚೋಳಿ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಘಟಾನುಘಟಿ ನಾಯಕರು ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಚಿಂಚೋಳಿ ಕ್ಷೇತ್ರದಲ್ಲಿ ಎರಡೂ ಪಕ್ಷದ ನಾಯಕರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದು, ಒಂದು ಕಡೆ ಕಾಂಗ್ರೆಸ್ ನಾಯಕರು ತಮ್ಮ ಅಭ್ಯರ್ಥಿ ಸುಭಾಷ್ ರಾಠೋಡ ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದರೆ, ಇನ್ನೊಂದೆಡೆ ಕಮಲ ನಾಯಕರು ಅವಿನಾಶ್ ಜಾಧವ್ ಪರ ಮತ ಭೇಟೆ ಶುರುಮಾಡಿದ್ದಾರೆ.
ಚಿಂಚೋಳಿ ಕ್ಷೇತ್ರದ ಟೆಂಗಳಿಯಲ್ಲಿ ನಡೆದ ಕಾಂಗ್ರೆಸ್ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಪ್ರಚಾರ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ, ಸಚಿವ ಪ್ರಿಯಾಂಕಾ ಖರ್ಗೆ ಸೇರಿದಂತೆ ಅನೇಕ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳವ ಮೂಲಕ ಅಭ್ಯರ್ಥಿ ಪರ ಮತಯಾಚಿಸಿದರು.
ಕಾಂಗ್ರೆಸ್ ಜಿಲ್ಲಾ ಪಂಚಾಯತ್ ವ್ಯಾಪ್ತಿ ಪ್ರಚಾರ ಸಭೆ ಇನ್ನೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಕಮಲ ನಾಯಕರಿಂದ ಅವಿನಾಶ್ ಜಾಧವ್ ಪರ ಭರ್ಜರಿ ಮತ ಭೇಟೆ ನಡೆಸಲಾಯಿತು. ನಗರದ ಪೋಲಿಸ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ. ವಿ.ಸೋಮಣ್ಣ, ಬಸನ್ನಗೌಡ ಯತ್ನಾಳ, ಎನ್.ರವಿಕುಮಾರ್, ಕುಡುಚಿ ಶಾಸಕ ಪಿ ರಾಜು, ಮಾಜಿ ಸಚಿವರಾದ ಸುನೀಲ್ ವಲ್ಯಾಪುರಿ, ವೈಜನಾಥ ಪಾಟೀಲ್ ಮತ್ತು ರಾಜುಗೌಡ ಸೇರಿದಂತೆ ಜಿಲ್ಲಾ ಬಿಜೆಪಿ ಮುಖಂಡರು ಭಾಗವಹಿಸಿ ಅವಿನಾಶ್ ಜಾಧವ್ ಪರ ಅಬ್ಬರದ ಪ್ರಚಾರ ನಡೆಸಿದರು.