ಮೈಸೂರು: 2014 ರಲ್ಲಿ ಮೋದಿ ಪ್ರಧಾನಿ ಆದ್ರೆ ದೇಶ ಬಿಡ್ತಿನಿ ಅಂದಿದ್ದ ದೇವೇಗೌಡ್ರು ಬಿಟ್ರಾ ? ಅಂತಹ ಮಾತುಗಳನ್ನು ಹೇಳಿ ಜನರ ದಿಕ್ಕು ತಪ್ಪಿಸಲು ಎಷ್ಟು ದಿನ ಸಾಧ್ಯವೆಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಎರಡಂಕಿ ದಾಡಲು ಬಿಡುವುದಿಲ್ಲ ಎನ್ನುವ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದರು. ಬಿಜೆಪಿ ಎರಡಂಕಿ ದಾಟಿದರೇ ದೇವೇಗೌಡರು ಏನು ಮಾಡ್ತಾರೆ, ಆಗ ದೇಶ ಬಿಡ್ತಿವಿ ಅಂದಿದ್ದರು ಬಿಟ್ರಾ ಎಂದು ಪ್ರಶ್ನಿಸಿದರು. ಅಲ್ಲದೆ ನಾವು ಜನರ ಭವಿಷ್ಯ ಕೇಳುವವರು, ಆದರೆ ರೇವಣ್ಣನ ತರ ನಿಂಬೆಹಣ್ಣು ಭವಿಷ್ಯ ಕೇಳುವುದಿಲ್ಲ ಎಂದು ಹಚ್ಡಿಡಿಗೆ ಟಾಂಗ್ ಕೊಟ್ಟರು.
ಕೆ.ಆರ್.ಪೇಟೆಯಲ್ಲಿ ನಿನ್ನೆ ನಡೆದ ಜೆಡಿಎಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ಬಂದರು ಇಲ್ಲಿ ಫಲಕಾರಿಯಾಗುವುದಿಲ್ಲವೆಂದು,ಹೆಚ್.ಡಿ. ದೇವೇಗೌಡರೇ ಹೇಳಿದ್ದಾರೆ. ಯಾಕಂದ್ರೆ ಅವರಿಗೆ ಈಗಲೇ ಸೋಲಿನ ಭಯ ಕಾಡುತ್ತಿದೆ. ಜೆಡಿಎಸ್ ಪಕ್ಷವನ್ನು ನಿರ್ನಾಮ ಮಾಡಲು ಸಿದ್ದರಾಮಯ್ಯ ಸಾಕು ಎಂದು ಅಶೋಕ್ ಕಿಚಾಯಿಸಿದರು.
ಪಾಕಿಸ್ತಾನಕ್ಕೆ ಜೈ ಅಂದ್ರೆ ಅಪರಾಧವಲ್ವಂತೆ. ಆದ್ರೆ ಕಾಂಗ್ರೆಸ್ನವರು ಸೈನ್ಯಕ್ಕೆ ಕೊಟ್ಟ ಸ್ವಾತಂತ್ರ್ಯವನ್ನು ವಾಪಸ್ ತೆಗಿತೀವಿ ಅಂತಾರೆ. ರಾಹುಲ್ ಗಾಂಧಿಗೆ ಮೈಂಡ್ ಮೆಚ್ಯುರಿಟಿ ಕಮ್ಮಿ, ಇದನ್ನು ಮಮತಾ ಬ್ಯಾನರ್ಜಿ ಅವರು ಕೂಡ ಒಪ್ಪಿಕೊಂಡಿದ್ದಾರೆ. ಮೋದಿಗೆ ಸರಿಸಮಾನವಾದ ವ್ಯಕ್ತಿ ಹುಡುಕಲು ಪ್ರತಿಪಕ್ಷಗಳು ವಿಫಲವಾಗಿವೆ ಎಂದು ಮಾಜಿ ಡಿಸಿಎಂ ಇದೇ ವೇಳೆ ವ್ಯಂಗ್ಯವಾಡಿದರು.
ಏ.8 ರಂದು ಪಕ್ಷದ ಪ್ರಣಾಳಿಕೆ ಬಿಡುಗಡೆಯಾಗುತ್ತಿರುವುದರಿಂದ ಮೈಸೂರಿಗೆ ಮೋದಿ ಅವರು ಆಗಮಿಸಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದು ಅಶೋಕ್ ಮಾಹಿತಿ ನೀಡಿದರು.