ಕೊಪ್ಪಳ:ಜಿಲ್ಲೆಯ ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು ತಲೆಯಲ್ಲಿ ಮೆದುಳಿಲ್ಲ. ಮೆದುಳಿಗೂ ನಾಲಿಗೆಗೂ ಕನೆಕ್ಷನ್ ಇಲ್ಲ ಎಂದು ಮಾಜಿ ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಟೀಕಿಸಿದ್ದಾರೆ.
ನಗರದ ಮೀಡಿಯಾ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಿವರಾಜ್ ತಂಗಡಗಿ, ನಾನು ಬಿಜೆಪಿ ಪರ ಕೆಲಸ ಮಾಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ ತತ್ವದಡಿ ಇರುವ ಪಕ್ಷ. ಕನಕಗಿರಿ ಶಾಸಕ ದಡೇಸೂಗೂರು ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿರಬಹುದು ಎಂದು ನನಗೆ ಅನುಮಾನ ಬರುತ್ತಿದೆ. ಅದಕ್ಕಾಗಿ ಅವರು ಈ ಹಿಂದೆ ಡಿಕೆಶಿ ಅವರನ್ನು ಸಂಪರ್ಕಿಸಿರಬಹುದು ಎಂದು ಟಾಂಗ್ ನೀಡಿದರು.
ಮಾಜಿ ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ನನ್ನ ಪತ್ನಿ ಕಳೆದ ವಿಧಾನಸಭಾ ಚುನಾವಣೆಗೆ ಅವರಿಗೆ ವೋಟ್ ಹಾಕಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ನನ್ನ ಪತ್ನಿ ಏನು ಎಂಬುದು ನನಗೆ ಗೊತ್ತು. ಒಂದು ವೇಳೆ ಈ ವಿಷಯ ನನ್ನ ಪತ್ನಿಗೆ ಗೊತ್ತಾದರೆ ಬೇರೇನೆ ಆಗುತ್ತದೆ. ಶಾಸಕ ದಡೇಸೂಗೂರ್ ತಲೇಲಿ ಬುದ್ಧಿ ಇಲ್ಲ, ಲದ್ದಿ ಇದೆ ಎಂದು ಟೀಕಿಸಿದರು.
ಬಸವರಾಜ ಅವರಿಗೆ ಮೋದಿ ಸರ್ಕಾರದ ಬಗ್ಗೆ ಗೊತ್ತಿದ್ದರೆ ಹೇಳಲಿ. ಮೋದಿ ಸಾಧನೆ ಶೂನ್ಯ. ಎಡಗೈ, ಬಲಗೈ ಬೀಸಿದರೆ ವೋಟು ಬರೋದಿಲ್ಲ ಎಂದರು. ಮೋದಿ ಹೇಳಿದಂತೆ ಜನರ ಅಕೌಂಟ್ಗೆ 15 ಲಕ್ಷ ರೂಪಾಯಿ ಹಾಕಲಿಲ್ಲ. ಉದ್ಯೋಗ ಸೃಷ್ಠಿಸಲಿಲ್ಲ. ರೈತರ ಆದಾಯ ದ್ವಿಗುಣ ಮಾಡುವ ಯೋಜನೆ ನೀಡಲಿಲ್ಲ. ಈ ಬಗ್ಗೆ ನಿನ್ನೆ ಗಂಗಾವತಿಯಲ್ಲಿ ನಡೆದ ಸಮಾವೇಶದಲ್ಲಿ ಮೋದಿ ಉತ್ತರ ನೀಡಿಲ್ಲ ಎಂದರು.
ಬಿಜೆಪಿಯ ರಾಜ್ಯ ಮಟ್ಟದ ನಾಯಕರು ಅಥವಾ ಜಿಲ್ಲಾ ಮಟ್ಟದ ನಾಯಕರು ನಮ್ಮ ಈ ಮೂರು ಪ್ರಶ್ನೆಗಳಿಗೆ ಉತ್ತರ ಕೊಡಲಿ. ಕೊನೆ ಪಕ್ಷ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿಯಾದರೂ ಉತ್ತರಿಸಲಿ. ಐದು ವರ್ಷದಲ್ಲಿ ಅವರ ಸಾಧನೆ ಶೂನ್ಯ ಎಂದು ಶಿವರಾಜ ತಂಗಡಗಿ ಆರೋಪಿಸಿದರು.