ಬೆಂಗಳೂರು : ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂಬ ಹೇಳಿಕೆಗಳಿಂದಲೇ ಮೈತ್ರಿ ಸರ್ಕಾರದ ವಾತಾವರಣ ಹದಗೆಡುತ್ತಿದ್ದು, ಆದಕಾರಣ ಯಾರೂ ಈ ವಿಷಯವನ್ನು ಪದೇ ಪದೇ ಚರ್ಚಿಸಬಾರದೆಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಮನವಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಹೆಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾರೆ. ಮುಂದಿನ ನಾಲ್ಕು ವರ್ಷಗಳವರೆಗೂ ಅವರೇ ಸಿಎಂ ಆಗಿರುತ್ತಾರೆ. ಜೆಡಿಎಸ್-ಕಾಂಗ್ರೆಸ್ ಎರಡೂ ಪಕ್ಷಗಳು ಸೇರಿಯೇ ಈ ತೀರ್ಮಾನ ತೆಗೆದುಕೊಂಡಿವೆ. ಹಾಗಾಗಿ ಯಾವುದೇ ಪಕ್ಷಗಳ ಮುಖಂಡರು ಗೊಂದಲಕಾರಿ ಹೇಳಿಕೆ ನೀಡಬಾರದು ಎಂದರು.
ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮುಂದೆ ಚುನಾವಣೆ ನಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ವಿಷಯ ಚರ್ಚೆಯಾಗಲಿ, ಸದ್ಯಕ್ಕೆ ಆ ವಿಷಯದ ಚರ್ಚೆ ಬೇಡ ಎಂದರು.
ಬರಗಾಲ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ದೇಶಪಾಂಡೆ, ಯಡಿಯೂರಪ್ಪ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ನಾವು ಬರಗಾಲವನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ. ಮುಖ್ಯಮಂತ್ರಿಯವರು ಎರಡು ಬಾರಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯಾಧಿಕಾರಿಗಳ ಸಭೆ ನಡೆಸಿದ್ದಾರೆ. ನಾನು ಎಲ್ಲ ಕಡೆ ಪ್ರವಾಸ ಮಾಡಿ ಪರಿಶೀಲನೆ ನಡೆಸಿದ್ದೇನೆ ಎಂದರು.
ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ. ಬರ ನಿರ್ವಹಣೆಗೆ ಹಣಕಾಸಿನ ಕೊರತೆ ಇಲ್ಲ, ಜಿಲ್ಲಾಧಿಕಾರಿಗಳ ವೈಯಕ್ತಿಕ ಖಾತೆಯಲ್ಲಿ 10 ಕೋಟಿ ರೂ. ಹಣವಿದೆ. ಎಲ್ಲಿಯಾದರೂ ಕುಡಿಯುವ ನೀರಿನ ಸಮಸ್ಯೆ ಕಂಡುಬಂದರೆ ತಕ್ಷಣ ಬಗೆಹರಿಸುತ್ತೇವೆ. ಬರ ಪರಿಹಾರ ಕಾಮಗಾರಿಗಳಿಗೆ ಕೆಲವು ತಾಂತ್ರಿಕ ಪ್ರಯತ್ನಗಳಿವೆ ಅದನ್ನು ಬಗೆಹರಿಸಿಕೊಂಡು ಬರನಿರ್ವಹಣೆ ಮಾಡುತ್ತಿದ್ದೇವೆಂದು ದೇಶಪಾಂಡೆ ಮಾಹಿತಿ ನೀಡಿದರು.