ಬೆಂಗಳೂರು :ಜೆಡಿಎಸ್ ವರಿಷ್ಠ ದೇವೇಗೌಡರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರನ್ನು ಕರೆಮಾಡಿ ಕರೆಸಿಕೊಂಡು ಕೆಲವೊಂದಿಷ್ಟು ಖಡಕ್ ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಪದ್ಮನಾಭ ನಗರದಲ್ಲಿ ನಡೆದ ಸಭೆಯಲ್ಲಿ ಹೆಚ್ ಡಿಡಿ ಹಾಗೂ ದಿನೇಶ್ ನಡುವೆ ಬಿಸಿ ಬಿಸಿ ಚರ್ಚೆ ನಡೆದಿದೆ. ಕೈ ನಾಯಕರಿಗೆ ಗೌಡ್ರು ಕೆಲ ಖಡಕ್ ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ. ನಿತ್ಯ ಎರಡೂ ಪಕ್ಷಗಳ ಮಧ್ಯೆ ಎಳೆದಾಟ ಸಾಧ್ಯವಿಲ್ಲ. ಅಧಿಕಾರಕ್ಕಾಗಿ ನಾವು ಅಂಟಿಕೊಂಡಿಲ್ಲ. ಚುನಾವಣೆ ವೇಳೆ ಕಾಂಗ್ರೆಸ್ ಬೆಂಬಲ ಸಿಕ್ಕಿಲ್ಲ. ಇನ್ನೂ ಸರ್ಕಾರ ಮುನ್ನಡೆಸಲು ಸೂಕ್ತ ಬೆಂಬಲವಾದ್ರು ಸಿಗುತ್ತಾ? ಎಂದು ಪ್ರಶ್ನಿಸಿದ್ದಾರೆ ಎಂದು ಹೇಳಲಾಗಿದೆ.
ದಿನಬೆಳಗಾದ್ರೆ ಶಾಸಕರನ್ನ ಸಮಾಧಾನ ಮಾಡುವುದೇ ಆಯ್ತು. ಒಂದಲ್ಲಾ ಒಂದು ಹೇಳಿಕೆಗಳನ್ನು ನೀಡಿ ಸರ್ಕಾರದಲ್ಲಿ ಗೊಂದಲ ಮೂಡಿಸಲಾಗುತ್ತಿದೆ. ಈ ಗೊಂದಲಗಳಲ್ಲಿ ಕೆಲಸ ಮಾಡೋದು ಹೇಗೆ? ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಿಮ್ಮ ನಿರ್ಧಾರ ಏನು ಎಂದು ತಿಳಿಸಿ, ಮುಖಂಡರ ಜೊತೆ ಮಾತಾಡಿ ಸ್ಪಷ್ಟ ನಿರ್ಧಾರಕ್ಕೆ ಬನ್ನಿ. ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಆಗಬೇಕಾ ? ಬಳಿಕ ಮತ್ತೆ ಅಸಮಾಧಾನ ಅಂದ್ರೆ ಕಷ್ಟ. ನಿಮ್ಮ ಶಾಸಕರಲ್ಲಿನ ಅಸಮಾಧಾನ ಶಮನಗೊಳಿಸಬೇಕು. ಸರ್ಕಾರ ಸುಸೂತ್ರವಾಗಿ ನಡೆಯಬೇಕು. ಇಲ್ಲದಿದ್ದರೆ ಸರ್ಕಾರ ಇದ್ದು ಪ್ರಯೋಜನ ಏನು? ಎಂದು ಕೈ ಹೈಕಮಾಂಡ್ ಗೆ ದಿನೇಶ್ ಗುಂಡೂರಾವ್ ಮೂಲಕ ದೇವೇಗೌಡರು ಸ್ಟಷ್ಟ ಸಂದೇಶ ರವಾನಿಸಿದ್ದಾರೆ.
ಗೌಡರ ಈ ಗುಟುರನ್ನ ಕಾಂಗ್ರೆಸ್ ಹೈಕಮಾಂಡ್ ಎಷ್ಟರ ಮಟ್ಟಿಗೆ ಸಿರಿಯಸ್ಸಾಗಿ ತೆಗೆದುಕೊಳ್ಳುತ್ತದೆ, ಇಲ್ಲಿನ ನಾಯಕರು ರಾಹುಲ್ ಗಾಂಧಿ ಅವರ ಮಾತನ್ನ ಎಷ್ಟರ ಮಟ್ಟಿಗೆ ಪಾಲಿಸುತ್ತದೆ ಎನ್ನುವುದನ್ನ ಕಾದು ನೋಡಬೇಕಿದೆ.