ಸುಳ್ಯ:ಮಂಗಳೂರು ಬೆಂಗಳೂರಿಗೆ ಸರಿಸಾಟಿಯಾಗಿ ನಿಲ್ಲುವಂತಹ, ಎಲ್ಲಾ ರೀತಿಯ ಸೌಕರ್ಯಗಳನ್ನು ಪಡೆಯುವ ಅರ್ಹತೆ ಹೊಂದಿರುವ ನಗರ. ಆದರೆ ಬಿಜೆಪಿಯವರಿಗೆ ಮಂಗಳೂರು ನಗರ ಬೆಳೆಯೋದು ಬೇಕಾಗಿಲ್ಲ. ಈ ಭಾಗದಲ್ಲಿ ಅಶಾಂತಿಯನ್ನು ಸೃಷ್ಟಿಸುವ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸುಳ್ಯದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯುವಕರೇ ಬಿಜೆಪಿಯವರ ಕುತಂತ್ರಕ್ಕೆ ನೀವು ಬಲಿಯಾಗಬೇಡಿ. ನಿಮ್ಮನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ತೊಂದರೆಯಾದರೆ ನೀವೇ ಅನುಭವಿಸಬೇಕು. ಆದ್ರೆ ಬಿಜೆಪಿ ನಾಯಕರು ಆರಾಮಾಗಿ ದೆಹಲಿಯಲ್ಲಿ ಕುಳಿತಿರುತ್ತಾರೆ. ನಮ್ಮ ಮೈತ್ರಿ ಸರ್ಕಾರ ಈ ಒಂಬತ್ತು ತಿಂಗಳಲ್ಲಿ ಕರಾವಳಿ ಪ್ರದೇಶದಲ್ಲಿ ಒಂದೇ ಒಂದು ಗಲಭೆ ಆಗಲು ಅವಕಾಶ ನೀಡಿಲ್ಲ ಎಂದು ಶಾಂತಿ ಸುವ್ಯವಸ್ಥೆ ಬಗ್ಗೆ ತಿಳಿಸಿದರು.
ನಾವು ನರೇಂದ್ರ ಮೋದಿಯವರಂತೆ ಬೆಳಗ್ಗೆ ಎದ್ದು ಮುಖ ವ್ಯಾಕ್ಸ್ ಮಾಡಿಕೊಂಡು ನಿಮ್ಮ ಎದುರು ಬರುತ್ತಿಲ್ಲ. ಬೆಳಗ್ಗೆ ಸ್ನಾನ ಮಾಡಿ ಬಂದರೆ ಮಳೆ, ಬಿಸಿಲು ಏನೇ ಆದರೂ ಮತ್ತೆ ಸ್ನಾನ ಮಾಡುವುದು ಮರುದಿನ ಬೆಳಗ್ಗೆಯೇ. ನಾವು ಚೆನ್ನಾಗಿ ಕಾಣೋಲ್ಲ ನಿಮಗೆ. ನರೇಂದ್ರ ಮೋದಿಯವರು ಸ್ವಲ್ಪ ಫಳಫಳ ಅಂತ ಹೊಳೆಯುತ್ತಿರುತ್ತಾರೆ. ಕೈಜೋಡಿಸಿ ಮನವಿ ಮಾಡುತ್ತೇನೆ ಅದನ್ನು ನೋಡಿ ಮರುಳಾಗಬೇಡಿ. ಜಿಲ್ಲೆಯ ಅಭಿವೃದ್ಧಿಗೆ ಮೈತ್ರಿ ಸರ್ಕಾರ ದೊಂದಿಗೆ ಕೈ ಜೋಡಿಸಿ ಸಹಕಾರ ನೀಡಿ, ಧರ್ಮದ ಹೆಸರಿನ ರಾಜಕೀಯಕ್ಕೆ ಇತಿಶ್ರೀ ಹಾಡಿ. ನಮ್ಮ ಮೈತ್ರಿ ಸರ್ಕಾರ ಯುವ ಅಭ್ಯರ್ಥಿ ಮಿಥುನ್ ರೈಯನ್ನು ಬೆಂಬಲಿಸಿ ಎಂದು ಜನರಲ್ಲಿ ಸಿಎಂ ಮನವಿ ಮಾಡಿದರು.
ಈ ಹಿಂದೆ ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಬಾಂಬ್ ಹಾಕಿರುವ ಘಟನೆಗಳು ನಡೆದಿದ್ದವಾ?. ಯುದ್ಧದ ಚಕಮಕಿಯಲ್ಲಿ ಯೋಧರು ಮರಣ ಹೊಂದಿದ ಪ್ರಸಂಗ ನಡೆದಿತ್ತಾ?. ಅತ್ಯಂತ ಶಾಂತಿಯುತವಾಗಿ ಜನ ಬದುಕಿದ್ದರು, ಆ ಹತ್ತು ತಿಂಗಳ ಅವಧಿಯಲ್ಲಿ ಯಾಕೆ ಭಯೋತ್ಪಾದಕರು ಬಾಂಬ್ ಹಾಕಿರಲಿಲ್ಲ, ಇವತ್ತು ಯಾಕೆ ಇಂತಹ ಸ್ಫೋಟ, ಭಯೋತ್ಪಾದಕರ ದಾಳಿಗಳು ನಡೆಯುತ್ತಿವೆ ಎಂದು ಪ್ರಶ್ನಿಸಿದರು. ಅಲ್ಲದೆ, ಇಂತಹ ಅಶಾಂತಿ ಪರಿಸ್ಥಿತಿಗೆ ಪ್ರಧಾನಿ ಮೋದಿ ಕಾರಣನಾ ಅಥವಾ ಬೇರೆಯವರಾ ಎಂಬುದನ್ನು ನೀವೇ ಯೋಚನೆ ಮಾಡಿ ಎಂದು ಮೋದಿ ವಿರುದ್ಧವೂ ಸಿಎಂ ಗುಡುಗಿದರು.