ಚಾಮರಾಜನಗರ: ಮೊದಲ ಹಂತದ ಚುನಾವಣೆ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮುಕ್ತಾಯವಾಗಿದ್ದು, ಅಂದಾಜು ಶೇ.73 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ತಿಳಿಸಿದ್ದಾರೆ.
2205 ಮತಗಟ್ಟೆ ಅಧಿಕಾರಿಗಳು, 2,205 ಸಹಾಯಕ ಅಧಿಕಾರಿಗಳು, 4410 ಮತದಾನ ಅಧಿಕಾರಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ವಿಶೇಷವಾಗಿ 10 ಸಖಿ ಮತಗಟ್ಟೆಗಳು, 4 ಸಾಂಪ್ರದಾಯಿಕ ಮತಗಟ್ಟೆಯನ್ನು ತೆರೆಯಲಾಗಿತ್ತು.
ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತವಾಗಿ ನಡೆದ ಮತದಾನ ಸಾಂಪ್ರದಾಯಿಕ ಮತಗಟ್ಟೆ
ಗಿರಿಜನರು ತಮ್ಮ ಹಕ್ಕು ಚಲಾಯಿಸುವಂತೆ ಪ್ರೇರೇಪಿಸಲು 4 ಸಾಂಪ್ರದಾಯಿಕ ಮತಗಟ್ಟೆಗಳನ್ನ ತೆಯಲಾಗಿತ್ತು. ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 36 ಸಾವಿರ ಸೋಲಿಗರು, ಕಾಡು ಕುರುಬ, ಜೇನುಕುರುಬ ಬುಡಕಟ್ಟು ಜನಾಂಗದವರು ವಾಸಿಸುತ್ತಾರೆ. ಇದರಲ್ಲಿ 23 ಸಾವಿರ ಮಂದಿ ಮತದಾರರಿದ್ದಾರೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ಹಾಗೂ ಹನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಗಿರಿಜನ ಆಶ್ರಮ ಶಾಲೆಯಲ್ಲಿ ಮತಗಟ್ಟೆ ಸ್ಥಾಪಿಸಲಾಗಿತ್ತು.
ತಮ್ಮ ಸಂಸ್ಕೃತಿಯನ್ನು ಬಿಂಬಿಸುವ ತಳಿರು ತೋರಣಗಳಿಂದ ಮತಗಟ್ಟೆಯನ್ನು ಚಪ್ಪರದಿಂದ ಶೃಂಗರಿಸಿದ್ದರಲ್ಲದೇ, ಮತಗಟ್ಟೆಗೆ ತಮ್ಮದೇ ಆದ ಸಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ತೊಟ್ಟು, ಗೊರುಕನ ನೃತ್ಯದ ಮೂಲಕ ಮತದಾನ ಕೇಂದ್ರಕ್ಕೆ ತೆರಳಿ, ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.
ಸಖಿ ಮತಗಟ್ಟೆಗಳಲ್ಲಿ ಮೊದಲ 100 ಮತದಾರರಿಗೆ ಗಿಡಗಳನ್ನು ನೀಡುವ ಮೂಲಕ ವಿಶಿಷ್ಟತೆ ಮೆರೆಯುವ ಜೊತೆಗೆ ಪರಿಸರ ಜಾಗೃತಿಯನ್ನು ಮೂಡಿಸಲಾಯಿತು.
ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು
ಚಾಮರಾಜನಗರ ತಾಲೂಕಿನ ಆಲೂರು ಗ್ರಾಮ ಹಾಗೂ ಮಲೆಮಹದೇಶ್ವರ ಬೆಟ್ಟ ಗ್ರಾ.ಪಂ ವ್ಯಾಪ್ತಿಯ ದೊಡ್ಡಾಣೆ, ತೋಕೆರೆ ಗ್ರಾಮಗಳಲ್ಲಿ ಮತದಾನ ಬಹಿಷ್ಕರಿಸಲಾಯಿತು. ಸುವರ್ಣಾವತಿ ಜಲಾಶಯದಿಂದ ನೀರು ಬಿಡದಿರುವುದರಿಂದ ಆಲೂರು ಗ್ರಾಮದ 800 ಕ್ಕೂ ಹೆಚ್ಚು ಮಂದಿ ಮತದಾನದಿಂದ ದೂರ ಉಳಿದರು. ಮಲೆಮಹದೇಶ್ವರ ಬೆಟ್ಟ ಗ್ರಾ.ಪಂ. ವ್ಯಾಪ್ತಿಯ ದೊಡ್ಡಾಣೆ ಹಾಗೂ ತೋಕೆರೆ ಗ್ರಾಮಕ್ಕೆ ಮೂಲಸೌಕರ್ಯ ನೀಡಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಮ್ಮ ಕಷ್ಟ ಕೇಳ್ತಿಲ್ಲವೆಂದು ಆರೋಪಿಸಿ ಮತದಾನ ಪ್ರಕ್ರಿಯೆಯಿಂದ ದೂರ ಉಳಿದರು.
ವೈರಲ್ ಆದ ಮತದಾನದ ಫೋಟೋ
ಮತಗಟ್ಟೆಗೆ ಮೊಬೈಲ್ ನಿಷೇಧವಿದ್ದರೂ ಕದ್ದುಮುಚ್ಚಿ ತಮ್ಮಿಚ್ಛೆಯ ಅಭ್ಯರ್ಥಿಗೆ ಮತ ಹಾಕಿರುವ ಫೋಟೋಗಳನ್ನು ಮತದಾರರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಘಟನೆಯೂ ಈ ಬಾರಿ ನಡೆಯಿತು. ಕೈ ಅಭ್ಯರ್ಥಿ ಧ್ರುವನಾರಾಯಣಗೆ ಮತ ಹಾಕುತ್ತಿರುವ 4-5 ಫೋಟೋಗಳು ವಾಟ್ಸ್ಯಾಪ್ ಗ್ರೂಪ್ಗಳಲ್ಲಿ ಹರಿದಾಡಿದವು.
ಕೈಕೊಟ್ಟ ಇವಿಎಂ ಹಾಗೂ ಮಳೆ ಅಡ್ಡಿ
ಜಿಲ್ಲೆಯ ವಿವಿಧೆಡೆ ಮತಯಂತ್ರಗಳು ಕೈಕೊಟ್ಟು 15 ನಿಮಿಷದಿಂದ ಒಂದೂವರೆ ತಾಸಿನವರೆಗೂ ಮತದಾನ ತಡವಾಗಿತ್ತು.ಯಳಂದೂರು ತಾಲೂಕಿನ ಉಪ್ಪಿನಮೋಳೆ ಗ್ರಾಮದ ಮತಗಟ್ಟೆ ಸಂಖ್ಯೆ 218ರಲ್ಲಿಮತಯಂತ್ರ ಕೈಕೊಟ್ಟಿತ್ತು. ಈ ವೇಳೆಬೆಳಗ್ಗೆ 7 ಕ್ಕೆ ಮತಗಟ್ಟೆಗೆ ಆಗಮಿಸಿದ್ದಸಚಿವ ಪುಟ್ಟರಂಗಶೆಟ್ಟಿ ಒಂದೂವರೆ ಗಂಟೆ ತಡವಾಗಿ ಮತದಾನ ಮಾಡುವಂತಾಯಿತು.
ತಡವಾಗಿ ಆರಂಭವಾದ ಮತದಾನ
ಗುಂಡ್ಲುಪೇಟೆ ತಾಲೂಕಿನ ಚಿಕ್ಕತುಪ್ಪೂರಿನ 2 ಮತಗಟ್ಟೆಗಳಲ್ಲಿ ಕೂಡ ಮತದಾನ ಒಂದು ತಾಸು ತಡವಾಗಿ ಆರಂಭವಾಗಿತ್ತು. ಸಖಿ ಮತಟ್ಟೆ ಹಾಗೂ ಸಾಮಾನ್ಯ ಮತಗಟ್ಟೆಗಳಲ್ಲಿ ಮತಯಂತ್ರದ ಗೊಂದಲ ಕಾಣಿಸಿಕೊಂಡಿದ್ದರಿಂದ ಒಂದು ತಾಸು ಮತದಾನ ವಿಳಂಬ ಆಯಿತು. ತಾಲೂಕಿನ ಹಲವೆಡೆ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದ್ದು ಮತದಾನಕ್ಕೆ ಅರ್ಧ ತಾಸು ಅಡ್ಡಿಯಾಯಿತು. ಬೊಮ್ಮಲಾಪುರ, ಕೊಡಸೋಗೆ, ಯಾನಗಳ್ಳಿ, ಬೊಮ್ಮನಹಳ್ಳಿ, ಅರಕಲವಾಡಿ ಸುತ್ತಮುತ್ತ ಗುಡುಗು-ಸಿಡಿಲು ಸಹಿತ ಭಾರಿ ಮಳೆ ಸುರಿಯಿತು. ಇನ್ನು, ಹನೂರಿನಲ್ಲಿ 5.30 ಕ್ಕೆ ಜಡಿ ಮಳೆ ಹಿಡಿದಿದ್ದರಿಂದ ಕಡೇ ಅರ್ಧ ತಾಸು ಮತದಾರದು ಮತದಾನದಿಂದ ದೂರವೇ ಉಳಿದರು.
ಜನತಂತ್ರದ ಹಬ್ಬದಲ್ಲಿ ಕಪ್ಪುಚುಕ್ಕೆಯಾಗಿ ಹೆಚ್ಚುವರಿ ಚುನಾವಣಾಧಿಕಾರಿ ಶಾಂತಮೂರ್ತಿ ಹೃದಯಾಘಾತದಿಂದ ಮೃತಪಟ್ಟರು. ಮಿಕ್ಕಂತೆ ಜಿಲ್ಲಾದ್ಯಂತ ಶಾಂತಿಯುತವಾಗಿ ಮತದಾನ ನಡೆಯಿತು.