ಯಾದಗಿರಿ:ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಒಬ್ಬ ಅಸಮರ್ಥ ನಾಯಕ ಎಂದು ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.ಗುರುಮಿಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಅವರು ಮಾತನಾಡಿದರು.
ಲೋಕಸಭಾ ಚುನಾವಣೆ ಪ್ರಚಾರಕ್ಕೆ ಯಾದಗಿರಿಯ ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಬಂದಳ್ಳಿಗೆ ಆಗಮಿಸಿದ ಖರ್ಗೆ, ಬಾಬುರಾವ್ ಚಿಂಚನಸೂರ ಗುರುಮಿಠಕಲ್ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ದಿ ಕೆಲಸ ಮಾಡಲಿಲ್ಲ. ಪರಿಣಾಮ ಇಲ್ಲಿನ ಜನರು ಅವರನ್ನು ಹೀನಾಯವಾಗಿ ಸೋಲಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಕಲಬುರಗಿ ಲೋಕಸಭೆ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದ ಉಮೇಶ ಜಾಧವ, ಆಪರೇಶನ್ ಕಮಲಕ್ಕೆ ಬಲಿಯಾಗಿದ್ದಾರೆ. ಕುದುರೆ ವ್ಯಾಪಾರ ಮಾಡಿ ಜಾಧವ್‌ರನ್ನು ದುಡ್ಡು ಕೊಟ್ಟು ಬಿಜೆಪಿಯವರು ಖರೀದಿಸಿದ್ದಾರೆ. ಇವರು ದುಡ್ಡು ತೆಗೆದುಕೊಂಡಿಲ್ಲ ಎಂದು ಪ್ರಚಾರದ ವೇಳೆ ಹೇಳಿಕೊಂಡರೆ ಜನರಿಗೆ ಗೊತ್ತಾಗದೆ ಇರುತ್ತದೆಯೇ..? ಈ ಬಾರಿ ಮತದಾರರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಈಗ ತಾನೆ ಬಿಜೆಪಿಗೆ ಸೇರ್ಪಡೆಯಾದ ಮಾಲಕ ರೆಡ್ಡಿಯವರು ಪ್ರಬುದ್ಧರು ಮಾತ್ರವಲ್ಲ, ಮಹಾಮುತ್ಸದ್ಧಿಗಳು. ಅವರು ಪಕ್ಷಬಿಟ್ಟು ಹೋಗಬಾರದಿತ್ತು. ಆದ್ರೆ ಅವರು ಬಿಜೆಪಿಗೆ ಹೋಗಿರುವುದರಿಂದ ಪಕ್ಷಕ್ಕೆ ಯಾವುದೇ ನಷ್ಟವಾಗಿಲ್ಲ ಎಂದು ಪ್ರಿಯಾಂಕ ಖರ್ಗೆ ತಿಳಿಸಿದರು.