ಬೆಂಗಳೂರು :ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಆನೇಕಲ್ ತಾಲೂಕಿನ ಮತಗಟ್ಟೆಗಳಲ್ಲಿ ಕಾರಣಾಂತರಗಳಿಂದ ಮತದಾನ ಮಂದಗತಿಯಲ್ಲಿ ಸಾಗಿದೆ.
ಆನೇಕಲ್ ತಾಲೂಕಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ - kannada news
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಆನೇಕಲ್ ತಾಲೂಕಲ್ಲಿ ಮತದಾನ ನೀರಸವಾಗಿದೆ. ಪ್ರತಿ ಮತಗಟ್ಟೆಯಲ್ಲಿ ಮತದಾನ ಮಂದಗತಿಯಲ್ಲಿ ನಡೆದಿದೆ.
ಆನೇಕಲ್ ನ ಗಟ್ಟಹಳ್ಳಿ, ಹುಸ್ಕೂರು, ರಾಗಿಹಳ್ಳಿ ದಾಸನಪುರ ಮುಂತಾದೆಡೆ ವಿವಿಧ ಕಾರಣಗಳಿಂದ ಮತದಾನಕ್ಕೆ ಕೊಂಚ ಅಡೆತಡೆ ಉಂಟಾಯಿತು. ದಾಸನಪುರದಲ್ಲಿ ಹಿರಿಯ ಮತದಾರರ ಹೆಸರು ಈ ಬಾರಿ ಮತದಾರರ ಪಟ್ಟಿಯಲ್ಲಿಲ್ಲದ ಕಾರಣ ಮತಗಟ್ಟೆಗೆ ಬಂದು ಸಿಬ್ಬಂದಿಯನ್ನು ಪ್ರಶ್ನಿಸಿದರು. ಮತಪಟ್ಟಿಯಲ್ಲಿ ಹೆಸರಿಲ್ಲದ್ದಕ್ಕೆ ಮತಗಟ್ಟೆಯವರು ತಮಗೆ ಇದು ಸಂಬಂಧಪಟ್ಟ ವಿಚಾರವಲ್ಲವೆಂದು ಸಮಜಾಯಿಸಿ ನೀಡಿ ವಾಪಸ್ ಕಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನೂ ಕೆಲವೆಡೆ ಇವಿಎಂ ಯಂತ್ರಗಳು ಕೈಕೊಟ್ಟ ಕಾರಣ ಚಂದಾಪುರ ಮುಖ್ಯ ನಿರ್ವಹಣಾ ಕೇಂದ್ರದಿಂದ ಅವುಗಳನ್ನು ಸರಿಪಡಿಸಿ ಬದಲಾಯಿಸುವಲ್ಲಿ ತಾಂತ್ರಿಕ ಚುನಾವಣಾಧಿಕಾರಿಗಳು ಯಶಸ್ವಿಯಾದರು. ಬೆಳಗ್ಗೆ ಮಂದಗತಿಯಿಂದ ಆರಂಭಗೊಂಡ ಮತದಾನ ನಂತರ 11-12ಗೆ ಚೇತರಿಕೆ ಕಂಡಿತ್ತು. ಮ. 1.3ರ ಸುಮಾರಿಗೆ 29.35% ಮತದಾನ ದಾಖಲಾಗಿತ್ತು.