ನವದೆಹಲಿ:ಎಲ್ಲ ರಾಜಕೀಯ ಪಕ್ಷಗಳೂ ಮೇ.30ರ ಒಳಗಾಗಿ ಪಕ್ಷಕ್ಕೆ ಚುನಾವಣಾ ಬಾಂಡ್ ರೂಪದಲ್ಲಿ ಸಂದಾಯವಾಗಿರುವ ಹಣದ ವಿವರವನ್ನು ಚುನಾವಣಾ ಆಯೋಗಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಕೆ ಮಾಡಬೇಕು ಎಂದು ಸೂಚನೆ ನೀಡಿದೆ.
ಪಕ್ಷಗಳು ಹಣ ನೀಡಿದವರ ಹೆಸರು, ಬ್ಯಾಂಕ್ ಖಾತೆ,ಹಣದ ವಿವರವನ್ನೂ ನೀಡಬೇಕು. ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ಆಯೋಗಕ್ಕೆ ಪಕ್ಷಗಳು ನೀಡಿದ ವಿವರವನ್ನು ಸುಪ್ರೀಂ ಮುಂದಿನ ಆದೇಶದವರೆಗೆ ಕವರ್ ಅನ್ನು ಒಡೆಯುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಈ ಮೊದಲು ಚುನಾವಣಾ ಬಾಂಡ್ಗಳನ್ನು 10 ದಿನಗಳಿಗೆ ನೀಡಲಾಗುತ್ತಿತ್ತು. ಸುಪ್ರೀಂ ಈ ಅವಧಿಯನ್ನು ಐದು ದಿನಕ್ಕೆ ಇಳಿಸಿದೆ. ಸುಪ್ರೀಂನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿ ಆದೇಶ ಹೊರಡಿಸಿದೆ. ಮುಂದಿನ ವಿಚಾರಣೆಯ ದಿನಾಂಕವನ್ನು ಕೋರ್ಟ್ ಇನ್ನೂ ನಿಗದಿಪಡಿಸಿಲ್ಲ.
ಏನಿದು ಚುನಾವಣಾ ಬಾಂಡ್?
ಕಪ್ಪು ಹಣವು ರಾಜಕೀಯ ಪಕ್ಷಗಳ ನಿಧಿಗೆ ಸೇರುವುದನ್ನು ತಡೆಯುವ ಸಲುವಾಗಿ ಚುನಾವಣಾ ಬಾಂಡ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಯಾವುದೇ ವ್ಯಕ್ತಿಯು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವಾಗ ಕೆವೈಸಿ ಫಾರಂ ಭರ್ತಿ ಮಾಡಿ ಹಣ ಸಂದಾಯ ಮಾಡಬೇಕು. ಪಕ್ಷಗಳು ಹಣ ನೀಡಿದವರ ಹೆಸರನ್ನು ಬಹಿರಂಗಪಡಿಸಕೂಡದು ಎಂದು ನಿಯಮ ಜಾರಿಗೆ ತರಲಾಗಿತ್ತು. ಹೆಸರು ಗೌಪ್ಯವಾಗಿಡುವ ವಿಚಾರವನ್ನು ಪ್ರಶ್ನಿಸಿ ದೆಹಲಿ ಮೂಲದ ಎನ್ಜಿಒ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.