ನವದೆಹಲಿ:ಬದಲಾದ ರಾಜಕೀಯ ವಿದ್ಯಮಾನದಲ್ಲಿ ಬಿಜೆಪಿ ಸಖ್ಯ ತೊರೆದು ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಕಾಂಗ್ರೆಸ್ ಸೇರಿದ್ದರೆ, ಇವತ್ತು ಅವರ ಪತ್ನಿ ಪೂನಮ್ ಸಿನ್ಹಾ ಸಮಾಜವಾದಿ ಪಾರ್ಟಿ ಸೇರಿಕೊಂಡರು.
ಸಮಾಜವಾದಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಸಮ್ಮುಖದಲ್ಲಿ ಪೂನಮ್ ಸಿನ್ಹಾ ಲಖನೌನಲ್ಲಿ 'ಸೈಕಲ್' ಏರಿ ಸವಾರಿ ಮಾಡುವುದಕ್ಕೆ ಸಿದ್ಧರಾದರು.
ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆಗೆ ಕೇವಲ ಎರಡು ದಿನ ಬಾಕಿ ಉಳಿದಿರುವಂತೆ ಪೂನಮ್ ಸಿನ್ಹಾ ಸಮಾಜವಾದಿ ಪಾರ್ಟಿ ಸೇರಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. 69 ವರ್ಷದ ಸಿನ್ಹಾ ಇದೇ ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡಿದ್ದಾರೆ. ಮೂಲಗಳ ಪ್ರಕಾರ, ಲಖನೌ ಕ್ಷೇತ್ರದಿಂದ ಸಮಾಜವಾದಿ ಪಾರ್ಟಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.
ಪ್ರತಿಷ್ಠಿತ ಕ್ಷೇತ್ರ ಲಖನೌ:
ಬಿಜೆಪಿಯ ಭದ್ರಕೋಟೆಯಾಗಿರುವ ಲಖನ್‌ದಲ್ಲಿ 1991ರಿಂದ 2009ರ ತನಕ ದಿ. ಅಟಲ್ ಬಿಹಾರಿ ವಾಜಪೇಯಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆ ಬಳಿಕ ರಾಜನಾಥ್ ಸಿಂಗ್ ಗೆಲುವಿನ ಅಭಿಯಾನ ಮುಮದುವರೆಸಿದ್ದಾರೆ. ಇಂದು ಚುನಾವಣೆಗೆ ರಾಜನಾಥ್ ಸಿಂಗ್ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದರು. ಇದರ ಬೆನ್ನೆಲ್ಲೆ ಪೂನಮ್ ಸಮಾಜವಾದಿ ಪಕ್ಷ ಸೇರಿದ್ದಾರೆ.