ನವದೆಹಲಿ:ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆಗೆ ಇನ್ನು ಕೇವಲ ಮೂರು ದಿನಗಳಷ್ಟೇ ಬಾಕಿ ಇದ್ದು, ಆಡಳಿತಾರೂಢ ಪಕ್ಷ ಬಿಜೆಪಿ 'ಸಂಕಲ್ಪ ಪತ್ರ' ಹೆಸರಿನಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಗೃಹ ಸಚಿವ ರಾಜನಾಥ್ ಸಿಂಗ್ ಸಂಕಲ್ಪ ಪತ್ರವನ್ನು ಜನತೆಯ ಮುಂದಿಟ್ಟಿದ್ದಾರೆ. ಇದು ದೂರದೃಷ್ಟಿ ಹೊಂದಿರುವ ದಾಖಲೆ, ಇದು ಕೇವಲ ಭಾರತೀಯರನ್ನು ಸಂತುಷ್ಟಿಗೊಳಿಸುವುದು ಮಾತ್ರವಲ್ಲದೆ ಭಾರತದ ಹೆಮ್ಮೆ ಮತ್ತು ಆಕಾಂಕ್ಷೆಯೂ ಆಗಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಭಾರತದ ಸ್ವಾತಂತ್ರ್ಯದ 75ನೇ ವರ್ಷಾಚರಣೆಗಾಗಿ 75 ಸಂಕಲ್ಪಗಳನ್ನು ಹಾಕಿಕೊಂಡಿದ್ದೇವೆ. 2022 ವೇಳೆಗೆ ನಮ್ಮ ಸಂಕಲ್ಪಗಳನ್ನು ಯಶಸ್ವಿಯಾಗಿ ಪೂರೈಸಲಿದ್ದೇವೆ ಎಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಸಂಕಲ್ಪ ಪತ್ರದಲ್ಲೇನಿದೆ..?
- 1 ಲಕ್ಷದವರೆಗೂ ಶೂನ್ಯ ಬಡ್ಡಿದರದಲ್ಲಿ ಸೀಮಿತ ಅವಧಿಯ ಕೃಷಿ ಸಾಲ. ಒಂದರಿಂದ ಐದು ವರ್ಷದ ಒಳಗಡೆ ಮರುಪಾವತಿ ಮಾಡುವ ಕಡ್ಡಾಯ ಮೇರೆಗೆ ಸಾಲ
- ಕಾಶ್ಮೀರದ ನಿವಾಸಿಗಳಿಗೆ ವಿಶೇಷ ಸೌಲಭ್ಯ ನೀಡುವ 370ನೇ ವಿಧಿ ಹಾಗೂ 35ಎ ವಿಧಿ ರದ್ದು
- ಕೇವಲ ಎರಡು ಹೆಕ್ಟೇರ್ ಮಾತ್ರವಲ್ಲದೆ ಎಲ್ಲ ರೈತರಿಗೂ ಕಿಸಾನ್ ಸಮ್ಮಾನ್ ನಿಧಿಯ ವಿಸ್ತರಣೆ
- ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ 60 ವರ್ಷದ ಬಳಿಕ ಪಿಂಚಣಿ
- ಗ್ರಾಮೀಣ ಅಭಿವೃದ್ಧಿಗೂ ಪ್ರಣಾಳಿಕೆಯಲ್ಲಿ ಒತ್ತು ನೀಡಲಾಗಿದ್ದು, ರಸ್ತೆ ನಿರ್ಮಾಣ, ಎಲ್ಲ ಮನೆಗಳಿಗೂ ಕುಡಿಯುವ ನೀರನ್ನು 2024ರ ಒಳಗೆ ಪೂರೈಸುವ ಭರವಸೆ
- ಉಗ್ರರ ದಮನ, ಆರ್ಥಿಕತೆಯ ಉತ್ತೇಜನ ವಿಚಾರಗಳು ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಹೈಲೈಟ್ಸ್.