ಚೆನ್ನೈ:ಲೋಕಸಭಾ ಚುನಾವಣೆಯ ತಮಿಳುನಾಡು ರಾಜ್ಯದ 39 ಕ್ಷೇತ್ರಗಳಲ್ಲಿ ಇಂದು 5 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.
ಚೆನ್ನೈನ ಸೆಂಟ್ರಲ್ ಸಂಸತ್ ಕ್ಷೇತ್ರದಲ್ಲಿ ನಟ,ರಾಜಕಾರಣಿ ರಜನಿಕಾಂತ್ ಮುಂಜಾನೆಯೇ ತಮ್ಮ ಮತವನ್ನು ಚಲಾಯಿಸಿದರು. ಕ್ಷೇತ್ರದ ಸ್ಟೇಲಾ ಮಾರಿಸ್ ಕಾಲೇಜು ಮತಗಟ್ಟೆಗೆ ಆಗಮಿಸಿದ ರಜನಿ, ಸಾಮಾನ್ಯರಂತೆ ಸರತಿ ಸಾಲಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.
ಈ ವೇಳೆ ಮಾಧ್ಯಮದವರು ರಜನಿಕಾಂತ್ ಅವರ ಪ್ರತಿಕ್ರಿಯೆ ಕೇಳಲು ಬಯಸಿದರು. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಲು ರಜನಿ ನಿರಾಕರಿಸಿದರು. ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಅವರು ಶಿವಗಂಗೆ ಕ್ಷೇತ್ರದ ಕರೈಕುಡಿ ಮತಗಟ್ಟೆಯಲ್ಲಿ ಮತದಾನ ಮಾಡಿದರು.
6 ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ ಚೆನ್ನೈ ಸೆಂಟ್ರಲ್ ಲೋಕಸಭಾ ಕ್ಷೇತ್ರವನ್ನು ರಚನೆ ಮಾಡಲಾಗಿದೆ. ಕ್ಷೇತ್ರದ ಒಟ್ಟು ಮತದಾರರು 13,28,027. ಇವರಲ್ಲಿ 6,65,278 ಪುರುಷರು, 6,62,749 ಮಹಿಳೆಯರಿದ್ದಾರೆ. ಎಸ್‌ಸಿ ಮೀಸಲು ಕ್ಷೇತ್ರವಿದಾಗಿದ್ದು, 2014ರಲ್ಲಿ ವಿಜಯ್ ಕುಮಾರ್ ಜಯಗಳಿಸಿದ್ದರು.
ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ಹಣ, ಮದ್ಯದ ಹೊಳೆಯಿಂದಾಗಿ ಚುನಾವಣೆಯನ್ನು ಚುನಾವಣಾ ಆಯೋಗದ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮುಂದೂಡಿದ್ದಾರೆ.