ಬುಲಂದ್‌ಶಹರ್ (ಯುಪಿ): ಮದುವೆ ಸಮಾರಂಭದ ಸಂಭ್ರಮಾಚರಣೆಯಲ್ಲಿ ಹಾರಿಸಿದ ಗುಂಡು ತಾಗಿ ಮಹಿಳೆ ಮೃತಪಟ್ಟಿರುವ ಘಟನೆ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಜಾವಿತ್ರಿ (48) ಮೃತ ದುರ್ದೈವಿ.
ಭಾನುವಾರ ತಡರಾತ್ರಿ ಸಮಾಸ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವಧುವಿನ ಸೋದರ ಸಂಬಂಧಿಯೇ ಕಂಟ್ರಿಮೇಡ್ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ. ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ಜಾವಿತ್ರಿ ಅವರಿಗೆ ಗುಂಡು ತಗುಲಿದೆ. ಗಂಭೀರ ಸ್ಥಿತಿಯಲ್ಲಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಮಾರ್ಗ ಮಧ್ಯಯೇ ಮಹಿಳೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.