ಗಢವಾ: ಜಾರ್ಖಂಡ್‌ನ ಗಢವಾ ಜಿಲ್ಲೆಯ ಭಾವನಾಥಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅಧೌರಾ ಗ್ರಾಮದಲ್ಲಿ ನಾಚಿಕೆಗೇಡಿನ ಸಂಗತಿಯೊಂದು ನಡೆದಿದೆ. ಮಹಿಳೆಯೊಬ್ಬರನ್ನು ಮಾಟಗಾತಿ ಎಂಬ ಹಣೆಪಟ್ಟಿ ಕಟ್ಟಿ ನಂತರ ಬಹುತೇಕ ವಿವಸ್ತ್ರಗೊಳಿಸಿ ಥಳಿಸಲಾಗಿದೆ ಎಂದು ವರದಿಯಾಗಿದೆ.
ಇನ್ನೂ ಅಮಾನುಷ ಕೆಲಸ ಎಂದರೆ ಮಹಿಳೆಯನ್ನು ರಕ್ಷಿಸಲು ಬಂದ ಆಕೆಯ ಪತಿ ಹಾಗೂ ಇಬ್ಬರು ಪುತ್ರಿಯರನ್ನೂ ಥಳಿಸಲಾಗಿದೆ. ಇವರೆಲ್ಲ ಜನರಿಂದ ಏಟು ತಿಂದು ಗಾಯಗೊಂಡಿದ್ದಾರೆ. ಹಲ್ಲೆ ನಡೆಸಿದವರು ಪ್ರಬಲರಾಗಿರುವುದರಿಂದ ಏಟು ತಿಂದ ಕುಟುಂಬ ಹಾಗೂ ಮಹಿಳೆ ಎರಡು ದಿನಗಳ ಕಾಲ ಮೌನಕ್ಕೆ ಶರಣಾಗಿದ್ದರು ಎಂದು ತಿಳಿದು ಬಂದಿದೆ.
ಆದರೆ, ಕೆಲವರು ಈ ಥಳಿತವನ್ನು ಕಂಡು, ಸಂತ್ರಸ್ತರಿಗೆ ಧೈರ್ಯ ತುಂಬಿದ ಬಳಿಕ ಧೈರ್ಯ ತಂದುಕೊಂಡ ಸಂತ್ರಸ್ತರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ವಿಷಯ ಪೊಲೀಸರು ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ದೂರಿನಲ್ಲಿ ಏನಿದೆ:ಗ್ರಾಮದ ಚುನಾಯಿತ ಜನಪ್ರತಿನಿಧಿಯೇ ಮಹಿಳೆ ಮೇಲೆ ಹಲ್ಲೆ ಮಾಡುವುದರ ನೇತೃತ್ವ ವಹಿಸಿದ್ದರು ಎಂದು ತಿಳಿದು ಬಂದಿದೆ. ಪ್ರಕರಣದಲ್ಲಿ ಒಟ್ಟು 11 ಮಂದಿಯನ್ನು ಹೆಸರಿಸಲಾಗಿದೆ. ಇತರ ಒಂಬತ್ತು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಸೆಪ್ಟೆಂಬರ್ 5 ರಂದು ರಾತ್ರಿ ಒಂಬತ್ತು ಗಂಟೆ ವೇಳೆಗೆ ಅಲ್ಲಿನ ವಾರ್ಡ್ ಸದಸ್ಯ ಸೇರಿದಂತೆ 11 ಜನರು ಮನೆಗೆ ನುಗ್ಗಿ ಮಹಿಳೆಗೆ ದೊಣ್ಣೆಯಿಂದ ಥಳಿಸಿದ್ದಾರೆ ಎಂದು ಮಹಿಳೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
ಮಹಿಳೆಯ ಬಟ್ಟೆ ಹರಿದು ಬಹುತೇಕ ಬೆತ್ತಲೆಗೊಳಿಸಲಾಗಿತ್ತು. ಅವರಿಂದ ತಪ್ಪಿಸಿಕೊಳ್ಳಲು ಮಹಿಳೆ ಅದೇ ಸ್ಥಿತಿಯಲ್ಲಿ ಓಡಲು ಯತ್ನಿಸಿದ್ದಾರೆ. ಆದರೂ ಬಿಡದ ಪಾಪಿಗಳು ಓಡೋಡಿ ಬಂದು ಥಳಿಸಿದ್ದಾರೆ. ಆದರೂ ಹೇಗೋ ತಪ್ಪಿಸಿಕೊಂಡು ಮಹಿಳೆ ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ. ಮಹಿಳೆಯ ಪತಿ ರಕ್ಷಣೆಗೆ ಮುಂದಾದಾಗ ಅವರನ್ನೂ ಹಿಗ್ಗಾಮುಗ್ಗಾ ಥಳಿಸಲಾಗಿದೆಯಂತೆ. ಅವರ ಸ್ಥಿತಿ ಸಾಕಷ್ಟು ಗಂಭೀರವಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಪ್ರಕರಣ ಮುಚ್ಚಿ ಹಾಕುವ ಯತ್ನ:ಗ್ರಾಮ ಪಂಚಾಯಿತಿಯಲ್ಲಿ ಈ ವಿಷಯ ಹತ್ತಿಕ್ಕುವ ಪ್ರಯತ್ನ ನಡೆದಿತ್ತು ಎಂದು ಸಂತ್ರಸ್ತೆ ಮಹಿಳೆ ಹೇಳಿದ್ದಾರೆ. ಆದರೆ ಎರಡು ದಿನಗಳ ಬಳಿಕ ಕೆಲವರು ಧೈರ್ಯ ತುಂಬಿದ್ದರಿಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂದರ್ಭದಲ್ಲಿ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಡ ಹೇರಲಾಗಿತ್ತು ಹಾಗೂ ಹೇರಲಾಗುತ್ತಿದೆಯಂತೆ. ಅಷ್ಟೇ ಅಲ್ಲ ದೂರು ಹಿಂಪಡೆಯದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಗುತ್ತಿದೆ ಎಂದು ಮಹಿಳೆ ಭೀತಿ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ:ತಂಗಿಯನ್ನೇ ಕೊಂದ ಅಣ್ಣನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ