ಸೀತಾಮಢಿ: ಬಿಹಾರದ ಸೀತಾಮಢಿಯಲ್ಲಿ 2 ಸಾವಿರ ರೂಪಾಯಿಗಾಗಿ ಪತ್ನಿಯೊಬ್ಬಳು ಪತಿಯನ್ನು ಹೀನಾಯವಾಗಿ ಥಳಿಸಿ ಆ್ಯಸಿಡ್ ಎರಚಿರುವ ಘಟನೆ ನಡೆದಿದೆ. ರಿಗಾ ಪೊಲೀಸ್ ಠಾಣೆ ವ್ಯಾಪ್ತಿಯ ಶಹಬಾಜ್‌ಪುರ ಗ್ರಾಮದಲ್ಲಿ ಇಂತಹದ್ದೊಂದು ಘಟನೆ ವರದಿಯಾಗಿದೆ. ಪತ್ನಿಯೊಬ್ಬಳು ತನ್ನ ಪತಿಯನ್ನು ತನ್ನ ತಾಯಿಯ ಮನೆಗೆ ಕರೆಯಿಸಿಕೊಂಡಿದ್ದಾಳೆ. ಬಳಿಕ ಕುಟುಂಬ ಸದಸ್ಯರೊಡಗೂಡಿ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಹಣ್ಣುಗಾಯಿ ನೀರುಗಾಯಿ ಆಗುವಂತೆ ಪತಿಯನ್ನು ಥಳಿಸಿದ್ದರೂ ಹೆಂಡತಿಯ ಕೋಪ ಮಾತ್ರ ತಣ್ಣಗಾಗಿಲ್ಲ. ಜಗಳದ ವೇಳೆ ಗಂಡನ ಕಣ್ಣಿಗೆ ಆ್ಯಸಿಡ್ ಕೂಡ ಹಾಕಿ ಭಾರಿ ವಿಕೃತಿ ಮೆರದಿದ್ದಾರೆ. ಮಹಿಳೆಯ ಕುಟುಂಬದವರೆಲ್ಲ ಸೇರಿ ಥಳಿಸುತ್ತಿರುವ ಸುದ್ದಿಯನ್ನು ಸ್ಥಳೀಯರು ನೋಡಿದ್ದು, ಈ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ.
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಳುವನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದೇ ವೇಳೆ ಸಂತ್ರಸ್ತನ ಸಂಬಂಧಿಕರಿಗೆ ಘಟನೆಯ ಬಗ್ಗೆ ಮಾಹಿತಿ ಕೂಡಾ ನೀಡಲಾಗಿದೆ.
10 ವರ್ಷಗಳ ಹಿಂದೆ ನಡೆದ ಪ್ರೇಮ ವಿವಾಹ: ನಾಗೇಶ್ವರ್ ಸಿಂಗ್ ಎಂಬ ಈ ವ್ಯಕ್ತಿ 10 ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ರಿಗಾ ಪೊಲೀಸ್ ಠಾಣೆ ವ್ಯಾಪ್ತಿಯ ಶಹಬಾಜ್‌ಪುರ ಗ್ರಾಮದ ರಾಮದಯಾಳ್ ಶಾ ಅವರ ಪುತ್ರಿ ಪಾರ್ವತಿ ಕುಮಾರಿಯೊಂದಿಗೆ ಈ ಮದುವೆ ನಡೆದಿತ್ತು. ನಾಗೇಶ್ವರ್‌ಗೆ ಒಬ್ಬ ಮಗನಿದ್ದಾನೆ. ಸುಖ ಸಂಸಾರವನ್ನೇ ಇಬ್ಬರು ನಡೆಸಿದ್ದಾರೆ.