ಮೀರತ್ (ಉತ್ತರ ಪ್ರದೇಶ): ಡಾಬಾದಲ್ಲಿ ಚಿಕನ್ ಊಟ ನೀಡದಿದ್ದಕ್ಕೆ ಪುಂಡನೊಬ್ಬ ಡಾಬಾ ಮಾಲೀಕನಿಗೆ ಥಳಿಸಿ, ಆತನ ಸೋದರಳಿಯನ ಕಾಲಿಗೆ ಗುಂಡು ಹಾರಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್-ಬುಲಂದ್‌ಶರ್ ಹೆದ್ದಾರಿ ಬಳಿ ನಡೆದಿದೆ. ರಸ್ತೆ ಬದಿ ಸಣ್ಣ ಡಾಬಾ ಇಟ್ಟುಕೊಂಡಿದ್ದ ವ್ಯಕ್ತಿಯ ಮೇಲೆ ಪುಂಡನೊಬ್ಬ ಈ ದುರ್ವತನೆ ತೋರಿದ್ದು, ಹೋಟೆಲ್‌ನಲ್ಲಿದ್ದ ಇತರ ಗ್ರಾಹಕರು ಬೆಚ್ಚಿಬಿದ್ದಿದ್ದಾರೆ. ಸದ್ಯ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕನ್ವರ್ ಯಾತ್ರೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೀರತ್‌ನ ಜಿಲ್ಲಾಡಳಿತ ಮಾಂಸಾಹಾರ ಸೇವನೆ ನಿಷೇಧಿಸಿ ಆದೇಶ ಹೊರಡಿಸಿದೆ. ಹೀಗಾಗಿ ಹೋಟೆಲ್‌ನಲ್ಲಿ ಮಾಂಸ ಊಟ ತಯಾರಿಸಿರಲಿಲ್ಲ. ಘಟನೆ ಸಂಬಂಧ ಡಾಬಾ ಮಾಲೀಕ ಅಬ್ದುಲ್ ವಹೀದ್ ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆ ವಿವರ:ಗ್ರಾಹಕನೊಬ್ಬ ಹೋಟೆಲ್‌ಗೆ ಬಂದು ಕೋಳಿ ಮಾಂಸದೂಟ ಕೇಳಿದ. ಜಿಲ್ಲಾಡಳಿತ ಆದೇಶದ ಮೇರೆಗೆ ಮಾಂಸಾಹಾರ ತಯಾರಿಸಿಲ್ಲ, 'ಕಧಿ ಚಾವಲ್' ಅಥವಾ ಇನ್ನಾವುದೇ ಸಸ್ಯಾಹಾರಿ ಖಾದ್ಯವನ್ನು ತೆಗೆದುಕೊಳ್ಳುವಂತೆ ಮನವಿ ಮಾಡಲಾಯಿತು. ಆದರೆ, ವ್ಯಕ್ತಿ ತನಗೆ ಊಟ ನಿರಾಕರಿಸಿದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಾಲೀಕನಿಗೆ ಬೆದರಿಕೆ ಹಾಕಿ ಅಲ್ಲಿಂದ ತೆರಳಿದ್ದಾನೆ. 1 ಗಂಟೆ ನಂತರ ಬೈಕ್‌ಗಳಲ್ಲಿ ಗ್ಯಾಂಗ್‌ವೊಂದನ್ನು ಕಟ್ಟಿಕೊಂಡು ಬಂದು ಹಲ್ಲೆ ಮಾಡಿ, ಬಳಿಕ ಗುಂಡು ಹಾರಿಸಿದ ಪರಿಣಾಮ ತನ್ನ ಸಂಬಂಧಿ ಮೊಹಮ್ಮದ್ ಅತೀಕ್ ಕಾಲಿಗೆ ಗಾಯವಾಗಿದೆ ಎಂದು ಅಬ್ದುಲ್ ವಹೀದ್ ದೂರಿನಲ್ಲಿ ತಿಳಿಸಿದ್ದಾನೆ.
ಘಟನೆ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಸೆಕ್ಷನ್‌ಗಳ ಅಡಿ ಐವರು ಹಾಗೂ 25 ಮಂದಿ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಗಲಾಟೆ ನಡೆದ ಸ್ಥಳದಲ್ಲಿದ್ದ ಸಿಸಿಕ್ಯಾಮರಾದಲ್ಲಿ ದಾಖಲಾಗಿದ್ದ ದೃಶ್ಯಗಳನ್ನು ಆಧರಿಸಿ ಈವರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಡ್ಯಾನ್ಸರ್ ಮೇಲೆ ಗುತ್ತಿಗೆದಾರ ಮತ್ತು ಸಹಚರರಿಂದ ಸಾಮೂಹಿಕ ಅತ್ಯಾಚಾರ: ಪ್ರಕರಣ ದಾಖಲು