ಬದೌನ್ (ಉತ್ತರ ಪ್ರದೇಶ): 2017ರಲ್ಲಿ ನಡೆದ ಯುವ ಜೋಡಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಸ್ಥಳೀಯ ನ್ಯಾಯಾಲಯವು ಒಂದೇ ಕುಟುಂಬದ ನಾಲ್ವರಿಗೆ ಮರಣದಂಡನೆ ವಿಧಿಸಿದೆ. ಜಿಲ್ಲಾ ನ್ಯಾಯಾಧೀಶ ಪಂಕಜ್ ಅಗರವಾಲ್ ಅವರು ಕಿಶನ್‌ಪಾಲ್, ಅವರ ಪತ್ನಿ ಜಲಧಾರ ಮತ್ತು ಅವರ ಪುತ್ರರಾದ ವಿಜಯಪಾಲ್ ಮತ್ತು ರಾಮ್‌ವೀರ್‌ಗೆ ಗುರುವಾರ ಮರಣದಂಡನೆ ವಿಧಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ವಕೀಲ ಅನಿಲ್ ಕುಮಾರ್ ಸಿಂಗ್ ಹೇಳಿದ್ದಾರೆ.
ಮೇ 14, 2017 ರಂದು ಉರೈನ ಗ್ರಾಮದ ನಿವಾಸಿ ಪಪ್ಪು ಸಿಂಗ್ ಎಂಬುವರು ತಮ್ಮ ಮಗ ಗೋವಿಂದ್ (24) ಮತ್ತು ಕಿಶನ್‌ಪಾಲ್ ಅವರ ಪುತ್ರಿ ಆಶಾ (22) ಅವರ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ನಾಲ್ವರು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾರೆ ಎಂದು ದೂರು ನೀಡಿದ್ದರು. ಕೊಲೆಗೂ ಮುನ್ನ ಗೋವಿಂದ್ ಮತ್ತು ಆಶಾ ಅವರನ್ನು ಮದುವೆಯ ನೆಪದಲ್ಲಿ ದೆಹಲಿಯಿಂದ ಗ್ರಾಮಕ್ಕೆ ಕರೆಸಿಕೊಳ್ಳಲಾಗಿತ್ತು.