ನೋಯ್ಡಾ:ಸಹೋದರಿಯರಿಬ್ಬರು 11 ನೇ ಮಹಡಿಯಿಂದ ಜಿಗಿದ ಘಟನೆ ನೋಯ್ಡಾದ ಪೊಲೀಸ್ ಠಾಣೆ ಸೆಕ್ಟರ್-39ರ ಪ್ರದೇಶದಲ್ಲಿ ನಡೆದಿದೆ. ಕಟ್ಟಡದಿಂದ ಜಿಗಿದ ಇಬ್ಬರಲ್ಲಿ ಒಬ್ಬ ಸಹೋದರಿ ಮೃತಪಟ್ಟಿದ್ದಾರೆ. ಇನ್ನೊಬ್ಬ ಸಹೋದರಿಯನ್ನು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇಬ್ಬರು ಹೆಣ್ಣು ಮಕ್ಕಳಿಗೂ ಮದುವೆ ಮಾಡಿಕೊಡಲು ತಾಯಿ ಬಯಸಿದ್ದರು ಎನ್ನಲಾಗಿದೆ. ಇದರಿಂದ ಕೋಪಗೊಂಡು ಈ ರೀತಿಯ ಕೃತ್ಯ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆಯ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಎರಡನೇ ಯುವತಿಯ ಮೃತದೇಹವನ್ನು ಸ್ವಾಧೀನಪಡಿಸಿಕೊಂಡ ಪಂಚನಾಮೆ ಬಳಿಕ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮಗಳ ಮದುವೆ ಮಾಡಲು ಬಯಸಿದ್ದ ತಾಯಿ;ಸುಧಾ ಎಂಬ ಮಹಿಳೆ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ನೋಯ್ಡಾದ ಪೊಲೀಸ್ ಠಾಣೆ ಸೆಕ್ಟರ್ 39 ಪ್ರದೇಶದ ಸದರ್‌ಪುರ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಇದರಲ್ಲಿ ನಿಕ್ಕಿಗೆ 19 ವರ್ಷ ಹಾಗೂ ಪಲ್ಲವಿಗೆ 17 ವರ್ಷ. ಪಲ್ಲವಿ ದೆಹಲಿಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದು, ನಿಕ್ಕಿ ಶಾಲೆಗೆ ಹೋಗುತ್ತಿರಲಿಲ್ಲ.
ತಾಯಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ತಂದೆ ತೀರಿಕೊಂಡಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿಗೂ ಮದುವೆ ನಿಶ್ಚಯಿಸಬೇಕು ಎಂದು ತಾಯಿ ಹೇಳಿದ್ದು, ಇದರಿಂದ ಸಿಟ್ಟಿಗೆದ್ದ ಸಹೋದರಿಯರಿಬ್ಬರು ಮನೆ ಬಿಟ್ಟಿದ್ದರು. ಅಷ್ಟೇ ಅಲ್ಲ ಇಬ್ಬರೂ ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ಸೆಕ್ಟರ್ 96ರಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ 11ನೇ ಮಹಡಿಯಿಂದ ಜಿಗಿದಿದ್ದಾರೆ.
11ನೇ ಮಹಡಿಯಿಂದ ಜಿಗಿದ ಪರಿಣಾಮ 19 ವರ್ಷದ ನಿಕ್ಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಆದರೆ ಇನ್ನೊಬ್ಬ ಸಹೋದರಿ ಪಲ್ಲವಿ ತೀವ್ರವಾಗಿ ಗಾಯಗೊಂಡಿದ್ದು, ನೋಯ್ಡಾದ ಸೆಕ್ಟರ್ 30 ರಲ್ಲಿರುವ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಲ್ಲವಿಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದೆಹಲಿಯ ಸಫ್ದರ್‌ಜಂಗ್‌ಗೆ ರವಾನಿಸಲಾಗಿದೆ.
ನೋಯ್ಡಾ ಪೊಲೀಸರು ಹೇಳಿದ್ದಿಷ್ಟು:ಇಬ್ಬರು ಸಹೋದರಿಯರು 11 ನೇ ಮಹಡಿಯಿಂದ ಜಿಗಿದಿದ್ದರಿಂದ ಒಬ್ಬ ಸಹೋದರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಇನ್ನೊಬ್ಬ ಸಹೋದರಿ ತೀವ್ರವಾಗಿ ಗಾಯಗೊಂಡಿದ್ದು, ಅವರಿಂದ ಯಾವುದೇ ಹೇಳಿಕೆ ಪಡೆಯಲು ಸಾಧ್ಯವಾಗಿಲ್ಲ ಎಂದು ನೋಯ್ಡಾದ ಹೆಚ್ಚುವರಿ ಡಿಸಿಪಿ ಅಶುತೋಷ್ ದ್ವಿವೇದಿ ಹೇಳಿದ್ದಾರೆ. ಈ ಸಂಬಂದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ:ಭಕ್ತಿಯ ಪರಾಕಾಷ್ಠೆ.. ನಾಲಿಗೆ ಕತ್ತರಿಸಿ ಶಕ್ತಿದೇವತೆಗೆ ಅರ್ಪಿಸಿದ ಭಕ್ತ!