ಬೆಂಗಳೂರು:ಮನೆಗಳ್ಳತನ ಮಾಡುವುದನ್ನೇ ಪಾರ್ಟ್ ಟೈಮ್ ಜಾಬ್ ಮಾಡಿಕೊಂಡಿದ್ದ ಎಲೆಕ್ಟ್ರಿಷಿಯನ್ ಸೇರಿ ಇಬ್ಬರು ಆರೋಪಿಗಳನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಗೋಪಾಲನಗರ ನಿವಾಸಿಗಳಾದ ಉಲ್ಲಾಸ್(35) ಮತ್ತು ರುದ್ರೇಶ್(30) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಬಂಧಿತರಿಂದ ಸುಮಾರು 7 ಲಕ್ಷ ರೂ. ಮೌಲ್ಯದ 94 ಗ್ರಾಂ ತೂಕದ ಚಿನ್ನಾಭರಣ, 70 ಗ್ರಾಂ ಬೆಳ್ಳಿ ಮತ್ತು 2.5 ಲಕ್ಷ ರೂ ನಗದು ಹಾಗೂ ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳ ಪೈಕಿ ಉಲ್ಲಾಸ್ ಎಲೆಕ್ಟ್ರಿಷಿಯನ್ ಆಗಿದ್ದು, ಈತನ ವಿರುದ್ಧ ಈ ಹಿಂದೆ ಬಸವೇಶ್ವರನಗರ ಠಾಣೆಯಲ್ಲಿ ಕಳತನ, ರಾಜಗೋಪಾಲನಗರ ಠಾಣೆಯಲ್ಲಿ ದರೋಡೆಗೆ ಸಂಚು, ಮಲ್ಲೇಶ್ವರ ಠಾಣೆಯಲ್ಲಿ ಡಕಾಯಿತಿ ಪ್ರಕರಣ ದಾಖಲಾಗಿದೆ.