ಹೈದರಾಬಾದ್ (ತೆಲಂಗಾಣ): ತೆಲಂಗಾಣದ ಆಡಳಿತಾರೂಢ ಟಿಆರ್‌ಎಸ್ ಪಕ್ಷದ ಸಂಸದ ನಾಮ ನಾಗೇಶ್ವರ ರಾವ್ ಅವರ ಪುತ್ರ ಎನ್.ಪೃಥ್ವಿತೇಜ್ ಅವರ ಕತ್ತಿಗೆಗೆ ಚಾಕುವಿಟ್ಟು ಬೆದರಿಸಿ 75 ಸಾವಿರ ರೂ. ಹಣವನ್ನು ಆನ್‌ಲೈನ್ ಮೂಲಕ ಹಾಕಿಸಿಕೊಂಡಿರುವ ಘಟನೆ ಹೈದರಾಬಾದ್ನಲ್ಲಿ ಬೆಳಕಿಗೆ ಬಂದಿದೆ.
ಜುಲೈ 30ರಂದು ನಾನು ನನ್ನ ಸ್ನೇಹಿತನನ್ನು ಭೇಟಿ ಮಾಡಲೆಂದು ಕಾರಿನಲ್ಲಿ ತೆರಳಲುತ್ತಿದ್ದೆ. ಈ ವೇಳೆ ಟೋಲಿಚೌಕಿ ಮುಖ್ಯರಸ್ತೆಯಲ್ಲಿ ಬೈಕ್ನಲ್ಲಿ ಬಂದು ಇಬ್ಬರು ವ್ಯಕ್ತಿಗಳು ಕಾರನ್ನು ಅಡ್ಡಗಟ್ಟಿ ಬಲವಂತವಾಗಿ ಕಾರಿನೊಳಗೆ ಏರಿದರು ಎಂದು ಓರ್ವ ವ್ಯಾಪಾರಿಯೂ ಆಗಿರುವ ಪೃಥ್ವಿತೇಜ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ಧಾರೆ.
ಕಾರು ಏರಿದ ಇಬ್ಬರು ಪೈಕಿ ಒಬ್ಬ ಮುಂದಿನ ಸೀಟ್ನಲ್ಲಿ ಕುಳಿತರೆ, ಮತ್ತೊಬ್ಬ ಹಿಂಬದಿ ಸೀಟ್ನಲ್ಲಿ ಕುಳಿತಿದ್ದ. ಡ್ರೈವರ್ ಸೀಟ್ನಲ್ಲಿದ್ದ ನನ್ನ ಕುತ್ತಿಗೆ ಚಾಕುವಿಟ್ಟು ಬೆದರಿಸಲು ಶುರು ಮಾಡಿದರು. ನಂತರ ಮಾರ್ಗ ಮಧ್ಯೆ ಮದ್ಯ ಅಂಗಡಿ ಸಮೀಪ ಕಾರು ನಿಲ್ಲಿಸಿ ಮದ್ಯ ಖರೀದಿಸಿದರು. ಅಲ್ಲಿಂದ ಕೊಂಡಾಪುರದ ಕಡೆ ಕಾರು ತೆಗೆದುಕೊಂಡು ಹೋಗುವಂತೆ ಹೇಳಿದರು. ಆ ಮಾರ್ಗದಲ್ಲಿ ಹೋಗಬೇಕಾದರೆ ಮತ್ತೊಬ್ಬ ವ್ಯಕ್ತಿ ಕಾರು ಹತ್ತಿದ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಂತರ ಮೂವರು ಸೇರಿಕೊಂಡ ಕಾರಿನಲ್ಲೇ ಮದ್ಯ ಸೇವಿಸಲು ಆರಂಭಿಸಿದರು. ಅಲ್ಲದೇ, ಓರ್ವ ಡ್ರೈವರ್ ಸೀಟಿನಲ್ಲಿ ಕುಳಿತು ತಾನೇ ಕಾರು ಓಡಿಸಲು ಶುರು ಮಾಡಿದ. ಈ ವೇಳೆ ಎಸ್ಆರ್ ನಗರದಲ್ಲಿ ದಾರಿಯಲ್ಲಿ ನಿಲ್ಲಿಸಿದ್ದ ಅನೇಕ ಬೈಕ್ಗಳಿಗೆ ಕಾರಿನಿಂದ ಗುದ್ದಿ, ನಂತರ ನನಗೆ ಕಾರು ಓಡಿಸಲು ಹೇಳಿದ. ಕಾರು ಪಂಜಗುಟ್ಟಾ ಪೊಲೀಸ್ ಠಾಣೆ ಬಳಿ ತಲುಪಿದಾಗ ನಾನು ಕಾರಿನಿಂದ ಹೊರಗಡೆ ಜಿಗಿದು ತಪ್ಪಿಸಿಕೊಂಡೆ. ಬಳಿಕ ಸ್ವಲ್ಪ ದೂರ ತೆರಳಿದ ಆರೋಪಿಗಳು ಸಹ ಕಾರನ್ನು ಅಲ್ಲೇ ಬಿಟ್ಟು ಓಡಿ ಹೋದರು ಎಂದು ಸಂಸದರ ಮಗ ತಮ್ಮ ದೂರಿನಲ್ಲಿ ತಿಳಿಸಿದ್ಧಾರೆ. ಈ ದೂರಿನ ಮೇರೆಗೆ ಪಂಜಗುಟ್ಟಾ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಸೀಟ್ ಬೆಲ್ಟ್ ಧರಿಸದೆ ಕಾರು ಪ್ರಯಾಣ: ಪ್ರಾಣ ಕಳೆದುಕೊಂಡ ಕಾಂಗ್ರೆಸ್ ಮುಖಂಡನ ಮಗಳು