ರಾಯ್‌ಪುರ: ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದ ಪಕ್ಕದ ಕೈಗಾರಿಕಾ ಪ್ರದೇಶವಾದ ಸಿಲ್ತಾರಾದಲ್ಲಿ ಕಲ್ಲಿದ್ದಲು ಬೂದಿ ತೆಗೆಯುತ್ತಿದ್ದ ವೇಳೆ ಹೊಂಡ ಕುಸಿದು ಭಾರೀ ಅವಘಡವೊಂದು ಸಂಭವಿಸಿದ್ದು, ಅವಘಡದಲ್ಲಿ ಇಬ್ಬರು ಮಹಿಳೆಯರು ಮತ್ತು ಓರ್ವ ಪುರುಷ ಸಾವನ್ನಪ್ಪಿದ್ದಾರೆ. ಅಪ್ರಾಪ್ತೆ ಸೇರಿದಂತೆ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದ್ದು, ನಂತರ ಕಲ್ಲಿದ್ದಲು ಬೂದಿಯಲ್ಲಿ ಹೂತುಹೋಗಿದ್ದ ಜನರನ್ನು ಹೊರತೆಗೆದಿದ್ದಾರೆ. ಅವರಲ್ಲಿ ಗಂಭೀರವಾಗಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಲ್ಲಿದ್ದಲು ಬೂದಿ ಉತ್ಖನನದ ವೇಳೆ ಅವಘಡ: ರಾಜಧಾನಿ ರಾಯ್‌ಪುರ ಜಿಲ್ಲೆಯ ಕೈಗಾರಿಕಾ ಪ್ರದೇಶವಾದ ಸಿಲ್ತಾರಾ ಚೌಕಿಯಲ್ಲಿ ಇಂದು ಮಧ್ಯಾಹ್ನ ಈ ಘಟನೆ ನಡೆದಿದೆ. ಐದು ಜನರ ಗುಂಪೊಂದು ತೆರೆದ ಪ್ರದೇಶದಲ್ಲಿ ಇಂಡಸ್ಟ್ರಿಗಳಿಂದ ಎಸೆದ ಹಾರು ಬೂದಿಯನ್ನು ಹೊರತೆಗೆಯುವ ಕಾರ್ಯದಲ್ಲಿ ತೊಡಗಿತ್ತು. ಕಂಪನಿಯು ತೆಗೆದ ಅವಶೇಷಗಳಿಂದ ಅಕ್ಕಪಕ್ಕದ ಗ್ರಾಮಸ್ಥರು ಬೂದಿ ತೆಗೆಯುತ್ತಾರೆ. ಈ ಹಾರು ಬೂದಿಯಲ್ಲಿ ಕಲ್ಲಿದ್ದಲಿನ ಅಂಶವೂ ಇರುತ್ತದೆ. ಈ ಪ್ರದೇಶದಿಂದ ಹೀಗೆ ತೆಗೆದ ಹಾರುಬೂದಿಯಿಂದ, ಕಲ್ಲಿದ್ದಲನ್ನು ಫಿಲ್ಟರ್ ಮಾಡಿಕೊಳ್ಳುತ್ತಾರೆ. ಹೀಗೆ ಫಿಲ್ಟರ್ ಮಾಡಿಕೊಂಡ ಕಲ್ಲಿದ್ದಲನ್ನು ಅಡುಗೆ ಉದ್ದೇಶಗಳಿಗಾಗಿ ಬಳಸುತ್ತಾರೆ. ಇದು ಅವರ ನಿತ್ಯದ ಕೆಲಸವಾಗಿತ್ತು.
ಮೂಲಗಳ ಪ್ರಕಾರ, ಇವರು ಇದೇ ರೀತಿ ಇಲ್ಲಿಂದ ಹಾರುಬೂದಿಯನ್ನು ಅಗೆಯುತ್ತಿದ್ದ ಕಾರಣ ಹೊಂಡ ಸುರಂಗದ ಆಕಾರವನ್ನು ಪಡೆದಿತ್ತು. ಇವರು ಹಾರು ಬೂದಿಯನ್ನು ಅಗೆಯುತ್ತಾ ಒಳೊಗೊಳಗೆ ಹೋಗಿದ್ದಾರೆ. ಈ ವೇಳೆ ಏಕಾಏಕಿ ಹೊಂಡ ಕುಸಿದು ಬಿದ್ದು, ಈವರೂ ಅದರೊಳಗೆ ಸಿಕ್ಕಿಬಿದ್ದಿದ್ದಾರೆ. ಮಾಹಿತಿ ಪಡೆದ ತಕ್ಷಣ ರಕ್ಷಣಾ ತಂಡದೊಂದಿಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಹೊಂಡದೊಳಗೆ ಸಿಲುಕಿದ ಎಲ್ಲರನ್ನೂ ಹೊರತೆಗೆದಿದ್ದಾರೆ. ಆದರೆ ಅದರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಗೊಂಡವರಲ್ಲಿ 15 ವರ್ಷದ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ.