ಉಳ್ಳಾಲ: ಮನೆ ಸಮೀಪ ನಿಲ್ಲಿಸಿದ್ದ ಆ್ಯಂಬುಲೆನ್ಸ್ನ ಗಾಜು ಒಡೆದು ಒಳಗಿದ್ದ ಪರಿಕರಗಳನ್ನು ಕಳವು ಮಾಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮುಕ್ಕಚ್ಚೇರಿ ಬಳಿ ನಡೆದಿದೆ.
ಆ್ಯಂಬುಲೆನ್ಸ್ ಗಾಜು ಒಡೆದು ಒಳಗಿದ್ದ ಪರಿಕರಗಳನ್ನು ಕಳವು ಮಾಡಿದ ದುಷ್ಕರ್ಮಿಗಳು
ಕೊರೊನಾ ಸೋಂಕಿತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಆ್ಯಂಬುಲೆನ್ಸ್ನ ಗಾಜು ಒಡೆದು ಒಳಗಿದ್ದ ಪರಿಕರಗಳನ್ನು ಖದೀಮರು ಕಳ್ಳತನ ಮಾಡಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ.
ಮಂಗಳೂರು ಗಂಗಾಧರ್ ಎಂಬುವರಿಗೆ ಸೇರಿದ ಶ್ರೀ ಗಣೇಶ್ ಆ್ಯಂಬುಲೆನ್ಸ್ನ ಗಾಜು ಒಡೆದು ಕಳ್ಳತನ ಮಾಡಲಾಗಿದೆ. ಮುಕ್ಕಚ್ಚೇರಿ ನಿವಾಸಿ ರಹೀಂ ಎಂಬುವರು ಆ್ಯಂಬುಲೆನ್ಸ್ ಚಲಾಯಿಸುತ್ತಿದ್ದು, ತಮ್ಮ ಮನೆ ಸಮೀಪ ವಾಹನ ನಿಲ್ಲಿಸಿದ್ದರು. ಆ್ಯಂಬುಲೆನ್ಸ್ನ ಗಾಜು ಒಡೆದಿರುವ ದುಷ್ಕರ್ಮಿಗಳು ಸೈರನ್ , ಆಕ್ಸಿಜನ್ ರೆಗ್ಯುಲೇಟರ್, ಪಿಪಿಇ ಕಿಟ್ಗಳನ್ನು ಹೊರೆಗೆಸೆದು ಕೆಲ ಪರಿಕರಗಳನ್ನು ಕಳವು ಮಾಡಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯಾದ್ಯಂತ ಕೊರೊನಾ ಸೋಂಕಿತರ ಸೇವೆಯಲ್ಲಿ ಶ್ರೀ ಗಣೇಶ್ ಆ್ಯಂಬುಲೆನ್ಸ್ ತೊಡಗಿಸಿಕೊಂಡಿತ್ತು. ಜಿಲ್ಲೆಯ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತರಾದ ಬಹುತೇಕರ ಅಂತಿಮ ಸಂಸ್ಕಾರವನ್ನು ಶ್ರೀ ಗಣೇಶ್ ಆ್ಯಂಬುಲೆನ್ಸ್ ಮುಖೇನ ನಡೆಸುತ್ತಾ ಬಂದಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ವಾಹನವನ್ನು ಹಾಳುಮಾಡಿರುವುದಕ್ಕೆ ಗಂಗಾಧರ್ ಅವರ ಪುತ್ರ ಪಚ್ಚು ಬೇಸರ ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ.