ಚೆನ್ನೈ:ಜ್ಯುವೆಲ್ಲರಿ ಶಾಪ್ಗೆ ಕನ್ನ ಹಾಕಿರುವ ಕಳ್ಳರು 9 ಕೆಜಿ ಚಿನ್ನ ಮತ್ತು 20 ಲಕ್ಷ ರೂ ಮೌಲ್ಯದ ವಜ್ರ ಕದ್ದೊಯ್ದಿದ್ದಾರೆ. ಪೆರಂಬೂರ್ನ ಪೇಪರ್ ಮಿಲ್ಸ್ ರಸ್ತೆಯಲ್ಲಿರುವ ಶ್ರೀಧರನ್ ಮಾಲೀಕತ್ವದ ಆಭರಣ ಮಳಿಗೆಯಲ್ಲಿ ಘಟನೆ ನಡೆದಿದೆ. ವೆಲ್ಡಿಂಗ್ ಮಷಿನ್ ಸಹಾಯದಿಂದ ಅಂಗಡಿಯ ಶಟರ್ ಕತ್ತರಿಸಿ ಒಳ ನುಗ್ಗಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿವರ: ಆಭರಣದ ಮಳಿಗೆ ಮಾಲೀಕ ಶ್ರೀಧರ್ ಅಂಗಡಿಯ ಎರಡನೇ ಅಂತಸ್ತಿನಲ್ಲಿ ವಾಸವಾಗಿದ್ದರು. ಕಳೆದ ಎಂಟು ವರ್ಷಗಳಿಂದ ಅವರು ಆಭರಣ ಮಳಿಗೆ ವ್ಯವಹಾರ ನಡೆಸುತ್ತಿದ್ದರು. ನಿನ್ನೆ ರಾತ್ರಿ ಎಂದಿನಂತೆ ಅಂಗಡಿ ಮುಚ್ಚಿ ಮನೆಗೆ ಮರಳಿದಾಗ ಘಟನೆ ನಡೆದಿದೆ. ಬೆಳಗ್ಗೆ ಶ್ರೀಧರನ್ ಅಂಗಡಿ ಬಾಗಿಲು ತೆಗೆಯಲು ಮುಂದಾದಾಗ ಪ್ರಕರಣ ಗೊತ್ತಾಗಿದೆ. ಅಂಗಡಿ ಮುಂದಿದ್ದ ಶಟರ್ ಅನ್ನು ತುಂಡರಿಸಲಾಗಿತ್ತು. ಲಾಕರ್ನಲ್ಲಿದ್ದ ಅಪಾರ ಪ್ರಮಾಣದ ಚಿನ್ನ, ವಜ್ರ ಕಾಣೆಯಾಗಿದೆ. ಸಿಸಿ ಕ್ಯಾಮರಾದ ಹಾರ್ಡ್ ಡಿಸ್ಕ್ ಮಾಯವಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರ ಸೋಗಿನಲ್ಲಿ ದರೋಡೆ: ಬೆಂಗಳೂರಿನಲ್ಲಿ ಪೊಲೀಸರು ಎಂದು ಹೇಳಿಕೊಂಡು ಚಿನ್ನದ ವ್ಯಾಪಾರಿಗಳಿಂದ 6 ಲಕ್ಷ ನಗದು ಮತ್ತು ಚಿನ್ನದ ಬಿಸ್ಕತ್ ದರೋಡೆ ಮಾಡಿದ್ದಾರೆ. ಫೆ.7ರಂದು ಮೂವರು ಖದೀಮರು ತಾವು ಪೊಲೀಸರೆಂದು ವ್ಯಾಪಾರಿ ಉಪೇಂದ್ರನಾಥ್ ಅವರ ಬಳಿ ಕೆಲಸಕ್ಕಿದ್ದ ಸುರೇಂದ್ರ ಅವರಿಂದ ಹಣ, ಚಿನ್ನವನ್ನು ಕಿತ್ತುಕೊಂಡಿದ್ದರು. ಬಸ್ನಿಲ್ದಾಣದ ಬಳಿ ತಾವು ಪೊಲೀಸರು, ಬ್ಯಾಗ್ ಪರಿಶೀಲನೆ ನಡೆಸಬೇಕು ಎಂದು ಹೇಳಿದ ಆರೋಪಿಗಳು, ಸುರೇಂದ್ರ ಅವರ ಬಳಿ ಇದ್ದ ಚಿನ್ನದ ಬಿಸ್ಕತ್ ಮತ್ತು ಆರು ಲಕ್ಷ ನಗದನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂಥದ್ದೇ ಮತ್ತೊಂದು ದರೋಡೆ: ಆಂಧ್ರಪ್ರದೇಶದ ಪೊಲೀಸರ ಸಮವಸ್ತ್ರ ಧರಿಸಿ ಹಾಡಹಗಲೇ 80 ಲಕ್ಷ ರೂ ಹಣ ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ವಿಲ್ಸನ್ ಗಾರ್ಡನ್ ಠಾಣಾ ಪೊಲೀಸರು ಬಂಧಿಸಿದ್ದರು. ಡಿಸೆಂಬರ್ 27ರಂದು ಮಧ್ಯಾಹ್ನ ಶಾಂತಿನಗರದ ಕೆ.ಎಚ್. ರಸ್ತೆಯ ಬಳಿ ಕಾರಿನಲ್ಲಿ ತೆರಳುತ್ತಿದ್ದ ಕುಮಾರಸ್ವಾಮಿ ಹಾಗೂ ಚಂದನ್ ಎಂಬವರನ್ನು ಪೊಲೀಸರ ಸೋಗಿನಲ್ಲಿ ಅಡ್ಡಗಟ್ಟಿ 80 ಲಕ್ಷ ದರೋಡೆ ಮಾಡಿ ಪರಾರಿಯಾಗಿದ್ದ ಆರೋಪಿಗಳಾದ ಭತಲ್ ಶಿವರಾಮ ಕೃಷ್ಣ ಯಾದವ್ (19), ಶೇಕ್ ಚೆಂಪತಿ ಲಾಲ್ ಬಾಷಾ (36), ಶೇಕ್ ಚೆಂಪತಿ ಜಾಕೀರ್ (27) ನನ್ನು ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಇಬ್ಬರು ಪ್ರಮಾಣವಚನ ಸ್ವೀಕಾರ