ಚಿತ್ರದುರ್ಗ: ಬಟ್ಟೆ ಅಂಗಡಿಯ ವ್ಯಾಪಾರಿಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪಟ್ಟಣದಲ್ಲಿ ನಡೆದಿದೆ. ಗುಂಡಿನ ಸದ್ದಿಗೆ ಪಟ್ಟಣ ಬೆಚ್ಚಿ ಬಿದ್ದಿದೆ.
ಮೂಲ್‌ಸಿಂಗ್ (35) ಕೊಲೆಯಾದ ವ್ಯಾಪಾರಿಯಾಗಿದ್ದು, ಹೊಳಲ್ಕೆರೆ ಪಟ್ಟಣದ ಹೊಸದುರ್ಗ ರಸ್ತೆಯ ಅನ್ನಪೂರ್ಣೇಶ್ವರಿ ಹೋಟೆಲ್ ಸಮೀಪದಲ್ಲಿರುವ ‘ಪ್ರಿಯದರ್ಶಿನಿ ಟೆಕ್ಸ್‌ಟೈಲ್’ ಎಂಬ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದರು.
ರಾತ್ರಿ 9.30ರ ಸುಮಾರಿಗೆ ಅಂಗಡಿಯ ಮುಂಭಾಗದಲ್ಲಿ ಇಟ್ಟಿದ್ದ ಬಟ್ಟೆಗಳನ್ನು ಒಳಗೆ ಎತ್ತಿ ಇಡುವಾಗ ಗುಂಡು ಹಾರಿಸಲಾಗಿದೆ. ಇಬ್ಬರು ದುಷ್ಕರ್ಮಿಗಳು ಈ ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವ್ಯಾಪಾರಿಯ ಕೊಲೆಗೆ ದುಷ್ಕರ್ಮಿಗಳು ಬಹುದಿನಗಳಿಂದ ಹೊಂಚು ಹಾಕಿರುವ ಸಾಧ್ಯತೆ ಇದೆ. ಕೆಸರಗಟ್ಟೆ ಕೆರೆ ಪಕ್ಕದಲ್ಲೇ ಬಟ್ಟೆ ಅಂಗಡಿ ಇರುವುದರಿಂದ ವ್ಯಾಪಾರಿ ಹೊರಗೆ ಬರುವ ಸಮಯಕ್ಕೆ ದುಷ್ಕರ್ಮಿಗಳು ಕಾದಿದ್ದಾರೆ. ಗುಂಡು ಹಾರಿಸಿ ಕಾಲ್ನಡಿಗೆಯಲ್ಲಿಯೇ ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ವಿವರಿಸಿದ್ದಾರೆ.