ಚಿಕ್ಕಮಗಳೂರು :ಜಿಲ್ಲೆಯ ಶೃಂಗೇರಿಯಲ್ಲಿ ಅಪ್ರಾಪ್ತೆ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.
ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ರಕ್ಷಣೆಗೆ ಶೃಂಗೇರಿ ಪೊಲೀಸರು ಮುಂದಾಗಿದ್ದಾರೆ ಎಂಬ ಅನುಮಾನ ಕಾಡುತ್ತಿದೆ. ಎಫ್ಐಆರ್ನಲ್ಲಿ ಪೊಲೀಸರು ಮಹಾ ಎಡವಟ್ಟು ಮಾಡಿದ್ದಾರೆಂಬ ಆರೋಪವೂ ಕೇಳಿ ಬರ್ತಿದೆ.
ಓದಿ: 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಶೃಂಗೇರಿಯಲ್ಲಿ 17 ಆರೋಪಿಗಳ ವಿರುದ್ಧ ಎಫ್ಐಆರ್
ಈ ಕುರಿತು ಕೇಸ್ ದಾಖಲಿಸುವಂತೆ ಸೂಚನೆ ನೀಡಿದ ಅಧಿಕಾರಿಯನ್ನೇ ದೂರುದಾರರನ್ನಾಗಿ ಶೃಂಗೇರಿ ಪೊಲೀಸರು ಮಾಡಿದ್ದಾರೆ. ಸಂತ್ರಸ್ತೆಯ ಹೇಳಿಕೆಯ ಆಧಾರದಲ್ಲಿ ಎಫ್ಐಆರ್ ದಾಖಲಿಸಬೇಕಿತ್ತು.
ಈ ಪ್ರಕರಣದಲ್ಲಿ ಆರೋಪಿಗಳ ರಕ್ಷಣೆಗಾಗಿ ಶೃಂಗೇರಿ ಪೊಲೀಸರು ಎಡವಟ್ಟು ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಪ್ರಕರಣದ ಆರೋಪಿಗಳು ಬಹುತೇಕರು ನಿರ್ದಿಷ್ಟ ಪಕ್ಷ ಹಾಗೂ ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ಈ ರೀತಿ ಪ್ರಕರಣ ದಾಖಲಿಸಿಕೊಂಡರೆ ಕೇಸ್ ನಿಲ್ಲುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದ್ದು, ನ್ಯಾಯಾಲಯದಲ್ಲಿ ದೂರು ಪ್ರತಿ ಕೇಳಿದ್ರೆ ದೂರು ಪ್ರತಿ ನೀಡುವುದಕ್ಕೆ ಆಗಲ್ಲ. ಯಾಕೆಂದರೆ, ಅಧಿಕಾರಿ ದೂರು ನೀಡಿಲ್ಲ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಈ ಕುರಿತು ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದ್ದರು.
ಆದರೆ, ಪೊಲೀಸರು ಸೂಚನೆ ನೀಡಿದ ಅಧಿಕಾರಿಯನ್ನೇ ದೂರುದಾರನನ್ನಾಗಿ ಮಾಡಿದ್ದು, ಇಷ್ಟು ದೊಡ್ಡ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾರಾ ಎಂಬ ಆರೋಪ ಕೇಳಿ ಬರುತ್ತಿವೆ. ರಕ್ಷಣೆ ಮಾಡಿದ ಅಪ್ರಾಪ್ತೆಯನ್ನು ಕೌನ್ಸೆಲಿಂಗ್ ಮಾಡಿಲ್ಲ. ವಿಷಯ ಗೊತ್ತಿದ್ದರೂ ಬಾಲ ಮಂದಿರಕ್ಕೆ ಬಾಲಕಿಯನ್ನ ಬಿಟ್ಟು ಪೊಲೀಸರು ಸುಮ್ಮನಾಗಿದ್ದಾರೆ ಅಂತ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಈ ಪ್ರಕರಣದ ಬಗ್ಗೆ ಎಎಸ್ಪಿ ಶೃತಿ ಮಾತನಾಡಿದ್ದು, ಪ್ರಕರಣದ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ಈ ಪ್ರಕರಣ ಕುರಿತು ಚಿಕ್ಕಮಗಳೂರಿನ ಕಸ್ತೂರಿ ಬಾ ಸದನ ಸಾಂತ್ವನ ಕೇಂದ್ರದ ಕಾರ್ಯದರ್ಶಿ ಮೋಹಿನ ಕೃಷ್ಣೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
''ಈ ಅಪ್ರಾಪ್ತೆ ನಮ್ಮ ಕೇಂದ್ರದಲ್ಲಿದ್ದು, ಆ ಬಾಲಕಿಯ ವಿಚಾರಣೆ ಮಾಡಿದ್ದೇವೆ. ಆಕೆ ಈಗಾಗಲೇ ಹೇಳಿಕೆ ನೀಡಿದ್ದು, ನನ್ನ ಮೇಲೆ 30 ಜನರು ಅತ್ಯಾಚಾರ ಮಾಡಿದ್ದಾರೆ. ಚಿಕ್ಕಮ್ಮನೇ ಇದಕ್ಕೆ ಸಪೋರ್ಟ್ ಮಾಡುತ್ತಿದ್ದರು. ಬಾಲಕಿ ಹೇಳುತ್ತಿರೋದು 30 ಜನರು. ಆದರೆ, ಸಿಕ್ಕಿರೋದು ಮಾತ್ರ 13 ಜನರು ಮಾತ್ರ. ಈ ಪ್ರಕರಣವನ್ನು ಎಸ್ಪಿ ಗಂಭೀರವಾಗಿ ತೆಗೆದುಕೊಳ್ಳಬೇಕು.
ಕೆಲವರು ಆ ಬಾಲಕಿಯ ಫೋಟೋ, ವಿಡಿಯೋ ಮಾಡಿ ಹೆದರಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಹೈದ್ರಾಬಾದ್ನಲ್ಲಿ ಮಾಡಿದ ರೀತಿ ಸಾಲಾಗಿ ನಿಲ್ಲಿಸಿ ಗುಂಡಿಟ್ಟು ಕೊಲ್ಲಬೇಕು. ಎಲ್ಲರಿಗೂ ಶಿಕ್ಷೆ ಆಗಬೇಕು'' ಎಂದು ಒತ್ತಾಯಿಸಿದ್ದಾರೆ.