ಕರ್ನಾಟಕ

karnataka

ETV Bharat / crime

ಅಡುಗೆ ಮಾಡದಿದ್ದಕ್ಕೆ ತಾಯಿಯನ್ನೇ ಕೊಂದ ಮಗ... ಮತ್ತೊಂದು ಕೇಸಲ್ಲಿ ಪುತ್ರಿಯಿಂದ ತಂದೆ ಕೊಲೆ ಆರೋಪ - ಅಡುಗೆ ಮಾಡದಿದ್ದಕ್ಕೆ ತಾಯಿಯನ್ನೇ ಮಗ ಕೊಂದ ಆರೋಪ

ಅಡುಗೆ ಮಾಡಿಲ್ಲ ಎಂದು ಮದ್ಯ ವ್ಯಸನಿ ತಾಯಿಯನ್ನು ಪುತ್ರನೊಬ್ಬ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ನಡೆದಿದ್ದರೆ, ಪುತ್ರಿಯೇ ತಂದೆಯನ್ನು ಕೊಲೆ ಮಾಡಿರುವ ಘಟನೆ ಇದೇ ತಾಲೂಕಿನ ಸೀಗರಕಟ್ಟೆ ಗ್ರಾಮದಲ್ಲಿ ನಡೆದಿದೆ.

son murder his mother because of she is not prepared food in mysore district
ಅಡುಗೆ ಮಾಡದಿದ್ದಕ್ಕೆ ತಾಯಿಯನ್ನೇ ಕೊಂದ ಮಗ..! ಮತ್ತೊಂದು ಕೇಸಲ್ಲಿ ಪುತ್ರಿಯಿಂದ ತಂದೆ ಕೊಲೆ ಆರೋಪ

By

Published : Mar 28, 2022, 12:02 PM IST

ಮೈಸೂರು: ಮನೆಯಲ್ಲಿ ಅಡುಗೆ ಮಾಡಿಲ್ಲ ಎಂದು ಕೋಪಗೊಂಡ ಮಗ ತಾಯಿಗೆ ಕಪಾಳಕ್ಕೆ ಹೊಡೆದಿದ್ದು, ಆಕೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಬಿಳಿಕೆರೆಯಲ್ಲಿ ನಡೆದಿದೆ. ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದ ಮಹದೇವಸ್ವಾಮಿ ಅವರ ಪತ್ನಿ ಜಯಮ್ಮ (54) ಮೃತಪಟ್ಟ ಮಹಿಳೆ. ಇವರಿಗೆ ಇಬ್ಬರು ಮಕ್ಕಳಿದ್ದಾರೆ.

ಜಯಮ್ಮ ಮದ್ಯ ವ್ಯಸನಿಯಾಗಿದ್ದು, ಇದೇ ವಿಚಾರವಾಗಿ ಮನೆಯಲ್ಲಿ ಮಕ್ಕಳ ನಡುವೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ. ಶನಿವಾರ ಸಹ ಹಗಲಿನಲ್ಲೇ ಜಯಮ್ಮ ಮದ್ಯೆ ಸೇವಿಸಿ ಅಡುಗೆ ಸಹ ಮಾಡಿಲ್ಲ ಎನ್ನಲಾಗಿದೆ. ಚಾಲಕನಾಗಿರುವ ಮಗ ಹರೀಶ್ ಮಧ್ಯಾಹ್ನ ಊಟಕ್ಕೆ ಮನೆಗೆ ಬಂದಾಗ ತಾಯಿ‌ ಅಡುಗೆ ಮಾಡಿರಲಿಲ್ಲ, ಇದರಿಂದ ಕೋಪಗೊಂಡ ಹರೀಶ್ ತಾಯಿಯ ಕಪಾಳಕ್ಕೆ ಹೊಡೆದಿದ್ದಾರೆ.

ಕುಸಿದು ಬಿದ್ದ ಜಯಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ. ತನ್ನ ಸಹೋದರನೇ ತಾಯಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಬಿಳಿಕೆರೆ ಪೊಲೀಸ್‌ ಠಾಣೆಯಲ್ಲಿ ಮೃತಳ ಪುತ್ರಿ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಇನ್ಸ್‌ಪೆಕ್ಟರ್ ರವಿಕುಮಾರ್ ಪ್ರಕರಣ ದಾಖಲಿಸಿಕೊಂಡು ಹರೀಶ್‌ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಪುತ್ರಿಯಿಂದಲೇ ತಂದೆಯ ಕೊಲೆ ಆರೋಪ:ಕೌಟುಂಬಿಕ ಕಲಹದಿಂದಾಗಿ ಪುತ್ರಿಯೇ ತಂದೆ ಕೊಲೆ ಮಾಡಿದ್ದಾಳೆ ಎಂಬ ದೂರು ಹಿನ್ನೆಲೆಯಲ್ಲಿ ಮಗಳನ್ನ ಬಂಧಿಸಿರುವ ಘಟನೆ ಹುಣಸೂರು ತಾಲೂಕಿನ ಸೀಗರಕಟ್ಟೆ ಗ್ರಾಮದಲ್ಲಿ ನಡೆದಿದೆ.

ಘಟನೆ ವಿವರ: ತಾಲೂಕಿನ ಸೀಗರಕಟ್ಟೆ ಗ್ರಾಮದ ದೇವರಾಜ್ ಮೃತಪಟ್ಟವರು. ಇವರಿಗೆ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳಿದ್ದು, ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಲಾಗಿದ್ದು, ಪುತ್ರಿ ಅನಿತಾ ಬಾಣಂತನಕ್ಕಾಗಿ 1 ವರ್ಷದ ಹಿಂದೆ ತಂದೆಯ ಮನೆಗೆ ಬಂದಿದ್ದರು. ಈ ಸಂಧರ್ಭದಲ್ಲಿ ತಂದೆ ದೇವರಾಜ್ ಮಗಳ‌ ಮಾಂಗಲ್ಯ ಸರವನ್ನ ಜಮೀನಿನ ಕೆಲಸಕ್ಕಾಗಿ ಗಿರವಿ ಇಟ್ಟು ಬಿಡಿಸಿಕೊಟ್ಟಿರಲಿಲ್ಲ ಎನ್ನಲಾಗಿದೆ.

ವಾಪಸ್ ಗಂಡನ ಮನೆಗೆ ತೆರಳಲು ಮಾಂಗಲ್ಯದ ಸರವನ್ನು ಬಿಡಿಸಿಕೊಡುವ ವಿಚಾರಕ್ಕೆ ಆಗಾಗ ತಂದೆ ಹಾಗೂ ಮಗಳ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಮಾರ್ಚ್ 25 ರಂದು ತಂದೆ ಹಾಗೂ ಮಗಳ ನಡುವೆ ಜಗಳ‌ವಾಗಿದೆ. ನೆರೆಯವರು ಬಂದು ಬಿಡಿಸಿದರು ಗಲಾಟೆ ನಿಂತಿರಲಿಲ್ಲ. ಮದ್ಯ ವ್ಯಸನಿಯಾಗಿದ್ದ ತಂದೆ ಹಾಗೂ ಅಕ್ಕನ ಗಲಾಟೆಯಿಂದ ಕೋಪಗೊಂಡ ಕಿರಿಯ ಪುತ್ರಿ ಸುನೀತಾ ಎನ್ನುವವರು ಅಡುಗೆ ಮನೆಯಲ್ಲಿದ್ದ ಸೌದೆಯಿಂದ ತಂದೆಯನ್ನು ಬೆದರಿಸಿದ್ದಾರೆ.

ಈ ಸಂಧರ್ಭದಲ್ಲಿ ಎಳೆದಾಟ ನಡೆದಿದ್ದು, ಆಯಾ ತಪ್ಪಿ ದೇವರಾಜ್ ಆಕಸ್ಮಿಕವಾಗಿ ಟಿವಿ.ಸ್ಟಾಂಡ್ ಮೇಲೆ ಬಿದ್ದಿದ್ದು, ಅವರ ತಲೆಗೆ ತೀವ್ರವಾಗಿ ಗಾಯವಾಗಿತ್ತು. ನಿಧಾನವಾಗಿ ತಂದೆ ಮೇಲೆ ಏಳುತ್ತಾರೆ ಎಂದು ಅಕ್ಕ, ತಂಗಿ ಒಳಗೆ ಹೋಗಿ ಮಲಗಿದ್ದಾರೆ. ಆದರೆ, ಮಾರನೇ ದಿನ (ಮಾರ್ಚ್ 26) ಬೆಳಗ್ಗೆ ಎದ್ದು ನೋಡಿದಾಗ ದೇವರಾಜ್ ರಕ್ತದ ಮಡುವಿನಲ್ಲಿ ಬಿದ್ದಿದ್ದರಿಂದ ಗಾಬರಿಗೊಂಡು ಪಕ್ಕದಲ್ಲಿ ಇದ್ದ ದೊಡ್ಡಪ್ಪನಿಗೆ ಹೇಳಿ ಕರೆದಿದ್ದಾರೆ. ಅವರು ಬರುವುದರೊಳಗೆ ದೇವರಾಜ್ ಮೃತಪಟ್ಟಿದ್ದರು ಎನ್ನಲಾಗಿದೆ.

ದೇವರಾಜ್ ಸಹೋದರ ಸ್ವಾಮಿಗೌಡ ರವರು ಸುನೀತಾಳೇ ಅವರ ತಂದೆಯನ್ನ ಹೊಡೆದು ಸಾಯಿಸಿದ್ದಾಳೆ ಎಂದು ಹುಣಸೂರು ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರಿನ‌ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು, ಇನ್ಸ್‌ಪೆಕ್ಟರ್ ಚಿಕ್ಕಸ್ವಾಮಿಯವರು ಆರೋಪಿ ಸುನೀತಾಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಶನಿವಾರ ಸಂಜೆ ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನ ಕುಟುಂಬದವರಿಗೆ ನೀಡಲಾಗಿದೆ.

ಇದನ್ನೂ ಓದಿ:ಟೈಯರ್​ ಸ್ಫೋಟಗೊಂಡು ಕಾರಿಗೆ ಡಿಕ್ಕಿ ಹೊಡೆದ ಬಸ್​.. ಸ್ಥಳದಲ್ಲೇ ಒಂದೇ ಕುಟುಂಬದ ಐವರ ದುರ್ಮರಣ

ABOUT THE AUTHOR

...view details